ಶಿರೂರು ಗುಡ್ಡ ಕುಸಿತದಿಂದ ಬಂಧು-ಬಳಗದವರನ್ನು ಕಳೆದುಕೊಂಡಿದ್ದ ಎರಡು ನಾಯಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ( Animal lover )ತಮ್ಮ ಮನೆಗೆ ಕರೆದೊಯ್ದಿದ್ದಾರೆ. ಅದಕ್ಕೆ ಚಿಕಿತ್ಸೆ ಕೊಡಿಸಿದ ನಂತರ ಪೊಲೀಸ್ ನಾಯಿಗಳ ಜೊತೆ ಇವುಗಳಿಗೂ ಅಗತ್ಯ ತರಬೇತಿ ನೀಡಿ ಸರ್ಕಾರಿ ಸೇವೆಗೆ ಬಳಸಿಕೊಳ್ಳಲಿದ್ದಾರೆ.
ಶಿರೂರು ಚಹಾ ಅಂಗಡಿಯ ಲಕ್ಷ್ಮಣ ಕುಟುಂಬದವರ ಜೊತೆ ಬೆರೆತಿದ್ದ ಈ ನಾಯಿಗಳನ್ನು ಇನ್ಮುಂದೆ ಪೊಲೀಸ್ ಕುಟುಂಬ ಸಾಕಲಿದೆ. ಲಕ್ಷ್ಮಣ ಕುಟುಂಬದವರ ಮರಣದ ನಂತರ ಅಲ್ಲಿನ ಎರಡು ನಾಯಿಗಳು ಅನಾಥವಾಗಿದ್ದವು. ಕೆಲ ದಿನಗಳವರೆಗೆ ಅಲ್ಲಿ ಹೋಗಿ-ಬರುತ್ತಿದ್ದ ಜನ ಆಹಾರ ನೀಡಿದ್ದರು. ಕಳೆದ ಐದಾರು ದಿನಗಳಿಂದ ಒಂದು ನಾಯಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದು, ಏನನ್ನು ಸೇವಿಸುತ್ತಿರಲಿಲ್ಲ. ಜೊತೆಗೆ ಗುಡ್ಡದ ತಪ್ಪಲನ್ನು ಬಿಟ್ಟು ಎಲ್ಲಿಯೂ ಹೋಗುತ್ತಿರಲಿಲ್ಲ.
ಬುಧವಾರ ಆ ನಾಯಿಯ ಸಮೀಪ ಹೋದ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವುಗಳ ಭಾವನೆ ಅರ್ಥ ಮಾಡಿಕೊಂಡರು. ನಾರಾಯಣ ಅವರು ಕೈ ಮುಂದೆ ಮಾಡಿದಾಗ ಅವು ಮುಂದಿನ ಕಾಲುಗಳನ್ನು ಅವರತ್ತ ಚಾಚಿದ್ದು, ಅಲ್ಲಿದ್ದ ಎರಡು ನಾಯಿಗಳನ್ನು ಅವರು ತಮ್ಮ ಮನೆಗೆ ಕರೆದುಕೊಂಡು ಬಂದರು.
ಗಾಯಗೊಂಡ ನಾಯಿಗೆ ಚಿಕಿತ್ಸೆ ನೀಡಿ ಅದಕ್ಕೆ ಅವರು ತಮ್ಮದೇ ಶೈಲಿಯಲ್ಲಿ ತರಬೇತಿ ನೀಡಲಿದ್ದಾರೆ. ಮೇಲಧಿಕಾರಿಗಳು ಇದಕ್ಕೆ ಒಪ್ಪಿಗೆ ನೀಡಿದ್ದು, ಶ್ವಾನದಳ ತಂಡಕ್ಕೆ ಈ ಎರಡು ನಾಯಿ ಸೇರ್ಫಡೆಗೆ ಅನುಮತಿ ನೀಡಿದ್ದಾರೆ. ಈ ಹಿನ್ನಲೆ ಅನಾಥವಾಗಿದ್ದ ಎರಡೂ ನಾಯಿಗಳು ಪೊಲೀಸ್ ವಾಹನ ಏರಿವೆ.
Discussion about this post