ಕುಮಟಾ: ಈಜಲು ತೆರಳಿ ಅಲೆಗಳ ಅಬ್ಬರಕ್ಕೆ ಸಿಲುಕಿದ್ದ ವಿದೇಶಿ ವೃದ್ಧೆಗೆ ಸ್ಥಳೀಯ ಜೀವ ರಕ್ಷಕ ಸಿಬ್ಬಂದಿ ಮರು ಜೀವ ನೀಡಿದ್ದಾರೆ. ಫ್ರಾನ್ಸಿನಿಂದ ಬಂದು ಅರಬ್ಬಿ ಸಮುದ್ರಕ್ಕೆ ಹಾರಿದ್ದ 73 ವರ್ಷದ ಧನ್ಯ ಎಂಬಾತರನ್ನು ಗೋಕರ್ಣದ ಲೈಫ್ಗಾರ್ಡ ಸಿಬ್ಬಂದಿ ದಡಕ್ಕೆ ಎಳೆದು ತಂದಿದ್ದಾರೆ.
ಗುರುವಾರ ಸಂಜೆ ಧನ್ಯ ಅವರು ಸಮುದ್ರಕ್ಕೆ ಹಾರಿದ್ದರು. ಅಲೆಗಳ ಅಬ್ಬರದ ನಡುವೆಯೂ ಬಹುದೂರದವರೆಗೆ ಈಜಿ ಹೋಗಿದ್ದರು. ಆದರೆ, ಮರಳಿ ಬರಲು ಸಾಧ್ಯವಾಗದೇ ಆಳ ಸಮುದ್ರದಲ್ಲಿ ಕೈ-ಕಾಲು ಬಡಿಯುತ್ತಿದ್ದರು.
ಅವರ ಬೊಬ್ಬೆ ನೋಡಿದ ಜೀವರಕ್ಷಕ ಸಿಬ್ಬಂದಿ ನಾಗೇಂದ್ರ ಕುರ್ಲೆ ಅವರು ಪ್ರದೀಪ ಅಂಬಿಗರನ್ನು ಕರೆದುಕೊಂಡು ಜಟ್ ಸ್ಕೀ ಮೂಲಕ ಸಮುದ್ರಕ್ಕೆ ಹಾರಿದರು. ಪ್ರವಾಸಿ ಮಿತ್ರ ಶೇಖರ ಹರಿಕಂತ್ರ ಸಹ ಅವರ ಜೊತೆ ತೆರಳಿ ಆ ವೃದ್ಧೆಯ ಜೀವ ಕಾಪಾಡಿದರು.