ಮನೆಯಲ್ಲಿ ಕುಳಿತು ಕಾಸು ಸಂಪಾದಿಸುವ ಯೋಚನೆಗೆ ಬಿದ್ದ ಶಿರಸಿಯ ಮಂಜುನಾಥ ಹೆಗಡೆ ಅವರು ತಾವು ದುಡಿದ ಹಣವನ್ನು ಕಳೆದುಕೊಂಡಿದ್ದಾರೆ. ತಮಗಾದ ಅನ್ಯಾಯದ ಬಗ್ಗೆ ಅವರು ಇದೀಗ ಪೊಲೀಸರ ಮೊರೆ ಹೋಗಿದ್ದಾರೆ.
ಶಿರಸಿ ಹುತ್ಕಾರ ಬಳಿಯ ಮಣಜವಳ್ಳಿ ಶಾಂತಿನಗರದ ಮಂಜುನಾಥ ಹೆಗಡೆ ಅವರು ಕೆನರಾ ಬ್ಯಾಂಕ್ ಎಚ್ ಎಸ್ ಬಿ ಸಿಯ ಉದ್ಯೋಗಿ. ಮಾರ್ಚ 18ರಂದು ಅವರ ಮೊಬೈಲಿಗೆ ಅಪರಿಚಿತ ಸಂಖ್ಯೆಯಿಂದ ಪೋನ್ ಬಂದಿದ್ದು, ಆ ಕಡೆಯಿಂದ ಮಾತನಾಡಿದವರು ‘ರೆಂಟ್ ಕಂಪನಿಯಲ್ಲಿ ಹಣ ಹೂಡಿದರೆ ಹೆಚ್ಚಿನ ಲಾಭ ಸಾಧ್ಯ’ ಎಂದು ನಂಬಿಸಿದ್ದಾರೆ. ವಂಚಕರು ಮೆಸೆಜ್ ಮೂಲಕವೂ ಸಂವಹನ ನಡೆಸಿ ಮಂಜುನಾಥ ಹೆಗಡೆ ಅವರ ವಿಶ್ವಾಸಗಳಿಸಿದ್ದಾರೆ.
ಹೀಗಾಗಿ ಮಂಜುನಾಥ ಹೆಗಡೆ ಅವರು ಒಟ್ಟು 3.12ಲಕ್ಷ ರೂ ಹೂಡಿಕೆ ಮಾಡಿದ್ದಾರೆ. ಮಾರ್ಚ 24ರಿಂದ ಮಾರ್ಚ 28ರ ಅವಧಿಯಲ್ಲಿ ಮಂಜುನಾಥ ಹೆಗಡೆ ಅವರಿಗೆ 12 ಸಾವಿರ ರೂ ಹಣವನ್ನು ಲಾಭ ಎಂದು ವಂಚಕರು ನೀಡಿದ್ದಾರೆ. ಆದರೆ, ಅದಾದ ನಂತರ ಮಂಜುನಾಥ ಹೆಗಡೆ ಅವರಿಗೆ ಯಾವ ಹಣವೂ ಸಿಕ್ಕಿಲ್ಲ.
ತಮ್ಮಲ್ಲಿ ಇದ್ದ 2.99 ಲಕ್ಷ ರೂ ಕಳೆದುಕೊಂಡ ನಂತರ ವಂಚನೆಗೆ ಒಳಗಾದ ಬಗ್ಗೆ ಮಂಜುನಾಥ ಹೆಗಡೆ ಅವರಿಗೆ ಗೊತ್ತಾಗಿದೆ. ಸೈಬರ್ ಕ್ರೈಂ ವಂಚಕರ ಪತ್ತೆಗಾಗಿ ಅವರು ಪೊಲೀಸ್ ದೂರು ನೀಡಿದ್ದು, ಪೊಲೀಸರು ಇದೀಗ ವಂಚಕರ ಹುಡುಕಾಟ ನಡೆಸಿದ್ದಾರೆ.