ಶಿರಸಿ: ರೈತರ ತೋಟ-ಗದ್ದೆಗಳಿಗೆ ಆನೆ ದಾಳಿ ಮಾಡಿದಾಗ ಅದನ್ನು ಓಡಿಸಲು ಅರಣ್ಯ ಇಲಾಖೆಯಲ್ಲಿ ಜನರಲ್ಲ. ಆದರೆ, ಆನೆ ಇರುವಿಕೆ ಖಚಿತಪಡಿಸಿಕೊಳ್ಳಲು ನಡೆಸಿದ ಡ್ರೋಣ್ ಕಾರ್ಯಾಚರಣೆ ವೀಕ್ಷಣೆಗೆ ಅರಣ್ಯ ಇಲಾಖೆ 25ಕ್ಕೂ ಅಧಿಕ ನೌಕರರನ್ನು ನೇಮಿಸಿದೆ!
ಮಲೆನಾಡಿನ ಹಲವು ಭಾಗದಲ್ಲಿ ಆನೆ ಹಾವಳಿ ವಿಪರೀತವಾಗಿದ್ದು, ಶಿರಸಿಯಲ್ಲಿ ಶನಿವಾರ ಡ್ರೋಣ್ ಬಳಸಿ ಆನೆಯ ಚಲನ-ವಲನ ವೀಕ್ಷಣಾ ಕಾರ್ಯ ನಡೆದಿದೆ. ರೈತರು ತಮ್ಮ ತೋಟ-ಗದ್ದೆಗಳಿಗೆ ಆನೆ ದಾಳಿ ನಡೆದಿದೆ ಎಂದು ಮಾಹಿತಿ ನೀಡಿದಾಗ ಮೊದಲು ಯಾರೂ ಬರಲಿಲ್ಲ. ಒತ್ತಡ ತಂದಾಗ ಮೂರ್ನಾಲ್ಕು ಸಿಬ್ಬಂದಿ ಮಾತ್ರ ಆಗಮಿಸಿ ಪಟಾಕಿ ಸಿಡಿಸಿ ಪರಾರಿಯಾಗಿದ್ದು, ಪಟಾಕಿ ಸದ್ದಿಗೆ ಆನೆ ಬೆದರಲಿಲ್ಲ. ಆದರೆ, ಶನಿವಾರ ಆನೆ ಎಲ್ಲಿ ಹಾನಿ ಮಾಡಿದೆ? ಎಂದು ವೈಮಾನಿಕ ಸಮೀಕ್ಷೆ ನಡೆಸಲು ಅರಣ್ಯ ಇಲಾಖೆ ಡ್ರೋಣ್ ಕಾರ್ಯಾಚರಣೆ ನಡೆಸಿದ್ದು, ಡ್ರೋಣ್ ಹಾರಟ ವೀಕ್ಷಣೆಗಾಗಿಯೇ 25ಕ್ಕೂ ಅರಣ್ಯ ಸಿಬ್ಬಂದಿ ಗಂಟೆಗಳ ಕಾಲ ಆ ಪ್ರದೇಶದಲ್ಲಿದ್ದರು!
ಶುಕ್ರವಾರ ರಾತ್ರಿ ಬೆಟ್ಟಕೊಪ್ಪದಲ್ಲಿ ಬೀಡು ಬಿಟ್ಟಿದ್ದ ಆನೆಯ ಹಿಂಡು ಆ ಭಾಗದ ತೋಟ-ಗದ್ದೆಗಳಗೆ ನುಗ್ಗಿದೆ. ಅಲ್ಲಿ ಅಪಾರ ಪ್ರಮಾಣದಲ್ಲಿ ಹಾನಿ ಮಾಡಿದ್ದರಿಂದ ರೈತರು ಜನಪ್ರತಿನಿಧಿಗಳ ಬಳಿ ತಮ್ಮ ದೂರು ಸಲ್ಲಿಸಿದ್ದಾರೆ. ಹೊಸಕೊಪ್ಪ, ಗವಿನಗುಡ್ಡ ಭಾಗದಲ್ಲಿ ಐದು ಆನೆಗಳ ಹಿಂಡು ದಾಳಿ ನಡೆಸಿದ್ದು ಈ ಬಗ್ಗೆ ಊರಿನವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆನೆ ದಾಳಿಗೆ ಅಲ್ಲಿ ನಡೆದ ಅವಾಂತರಗಳು ಸಾಕ್ಷಿಯಾಗಿದೆ. ಕಬ್ಬು, ಭತ್ತ, ಅಡಿಕೆ ತೋಟಕ್ಕೆ ಅಪಾರ ಹಾನಿಯಾಗಿದ್ದು ಕಂಡರೂ ವೈಮಾನಿಕ ಸಮೀಕ್ಷೆ ಮೂಲಕ ಅರಣ್ಯಾಧಿಕಾರಿಗಳು ಅದನ್ನು ಖಚಿತಪಡಿಸಿಕೊಂಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಜನರನ್ನು ಸಮಾಧಾನ ಮಾಡುವುದಕ್ಕಾಗಿ ಇಲಾಖೆಯವರು ಡ್ರೋಣ್ ಹಾರಿಸಿದ್ದಾರೆ!
ಅದಾಗಿಯೂ ಅರಣ್ಯಾಧಿಕಾರಿಗಳು ಡ್ರೋಣ್ ಹಾರಿಸಿ ಆನೆ ಇರುವಿಕೆಯನ್ನು ಖಚಿತಪಡಿಸಿಕೊಂಡಿದ್ದಾರೆ. ಕೆರೆ ಪಕ್ಕದ ಮೂರು ಎಕರೆಗೂ ಅಧಿಕ ಭತ್ತದ ಗದ್ದೆಗಳಲ್ಲಿ ಮಲಗಿ ಹೊರಳಾಟ ನಡೆಸಿವೆ. ಇಲ್ಲಿನ ಗಣಪತಿ ಮಹಾಬಲೇಶ್ವರ ಭಟ್ಟ, ಶರಾವತಿ ಪ್ರಭಾಕರ ಹೆಗಡೆ, ನರಸಿಂಹ ಹೆಗಡೆ, ಗಣೇಶ ನಾ ಹೆಗಡೆ ಭತ್ತ ಆನೆ ಹಾವಳಿಯಿಂದ ಹಾನಿಗೊಳಗಾಗಿದೆ. ಮಧುಕೇಶ್ವರ ಹೆಗಡೆ, ಮಹಾದೇವಿ ನಾಯ್ಕ, ರಾಘವೇಂದ್ರ ಹೆಗಡೆ, ಪರಮೇಶ್ವರ ನಾಯ್ಕ, ಸೀತಾರಾಮ ಹೆಗಡೆ, ರಾಮಚಂದ್ರ ಹೆಗಡೆಯವರ ತೋಟ-ಕಾಲುವೆಗಳು ಮೊದಲಿನಂತಿಲ್ಲ.
ಶುಕ್ರವಾರ ರಾತ್ರಿ ಬರೂರು, ಬೆಳಖಂಡ ಮಾರ್ಗವಾಗಿ ಸಂಚರಿಸಿದ ಆನೆಗಳ ಹಿಂಡು ಶನಿವಾರ ನಸುಕಿನಲ್ಲಿ ಬೆಟ್ಟಕೊಪ್ಪದ ಕೆರೆ – ತೋಟ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಈ ಬಗ್ಗೆ ಜನ ಮಾಹಿತಿ ನೀಡಿದ ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಮಧ್ಯಾಹ್ನ ವೇಳೆಗೆ ಆಗಮಿಸಿ ಡ್ರೋಣ್ ಹಾರಿಸಿದರು. ಆನೆ ದಾಳಿ ಚಿತ್ರಣಗಳನ್ನು ಗಮನಿಸಿ ನೊಂದವರಿಗೆ ಸಾಂತ್ವಾನ ಹೇಳಿದರು. ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿ ಎಂದು ಹೇಳಿ ಅಲ್ಲಿಂದ ಹೊರಟರು.
ಡ್ರೋಣ್ ಹಾರಾಟಕ್ಕೆ ಎಷ್ಟು ಜನ ಅರಣ್ಯ ಸಿಬ್ಬಂದಿ ಬಂದಿದ್ದರು? ಡ್ರೋಣ್ ಹೇಗೆ ಹಾರಿತು? ವಿಡಿಯೋ ಇಲ್ಲಿ ನೋಡಿ..