ಸೈಬರ್ ಕ್ರೆö ವಿಭಾಗದ ಡಿವೈಎಸ್ಪಿ ಅಶ್ವಿನಿ ಬಿ ಅವರ ಕುಟುಂಬದವರು ಚಲಿಸುತ್ತಿದ್ದ ಕಾರು ಮುಂಡಗೋಡದಲ್ಲಿ ಅಪಘಾತವಾಗಿದೆ. ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದರೂ ಟಾಟಾ ಎಸ್ ವಾಹನ ಕಾರಿಗೆ ಗುದ್ದಿರುವ ಬಗ್ಗೆ ಪೊಲೀಸ್ ಪ್ರಕರಣ ದಾಖಲಿಸಿರುವ ಬಗ್ಗೆ ಪೊಲೀಸ್ ಮಹಾನಿರ್ದೇಶಕರಿಗೆ ಇದೀಗ ದೂರು ಸಲ್ಲಿಕೆಯಾಗಿದೆ!
ಸಾಪ್ಟವೇರ್ ಇಂಜಿನಿಯರ್ ಆಗಿರುವ ಅಶ್ವಿನಿ ಬಿ ಅವರ ಪತಿ ಪ್ರವೀಣಕುಮಾರ ಅವರು ಜನವರಿ 18ರಂದು ಮುಂಡಗೋಡು ಟಿಬೇಟಿಯನ್ ಕಾಲೋನಿಯ ಗೋಶಾಲೆಯ ಬಳಿ ಕಾರು ಚಲಾಯಿಸುತ್ತಿದ್ದಾಗ ಹಜರತ್ಅಲಿ ಚೋಪಿದಾರ್ ಎಂಬಾತ ಟಾಟಾ ಎಸ್ ವಾಹನ ಗುದ್ದಿದ ಬಗ್ಗೆ ಪ್ರವೀಣಕುಮಾರ ಅವರು ಪೊಲೀಸ್ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸ್ ಸಿಬ್ಬಂದಿ ಚಂದ್ರಕಾ0ತ ರಾತೋಡ್ ತನಿಖೆ ನಡೆಸುತ್ತಿದ್ದಾರೆ. ಆದರೆ, `ಹಜರತ್ಅಲಿ ಹಾಗೂ ಈ ಅಪಘಾತಕ್ಕೆ ಯಾವುದೇ ಸಂಬ0ಧವಿಲ್ಲ’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ವಿಮಾ ಪರಿಹಾರ ಪಡೆಯುವುದಕ್ಕಾಗಿ ಅಮಾಯಕನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿರುವ ಬಗ್ಗೆ ಅವರು ದೂರಿದ್ದಾರೆ.
`ಆ ದಿನ ಅಶ್ವಿನಿ ಅವರ ತಂದೆ ಕಾರು ಓಡಿಸುತ್ತದ್ದರು. ಅವರು ಮರಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೆ ಒಳಗಾಗಿದ್ದಾರೆ. ಆ ಕಾರಿನ ವಿಮೆ ಮಾರ್ಚ 2023ರಲ್ಲಿಯೇ ಮುಕ್ತಾಯಗೊಂಡಿದ್ದು, ಅಪಘಾತದ ವಿಮೆ ಪರಿಹಾರ ಸಿಗುವ ಹಾಗಿರಲಿಲ್ಲ. ಹೀಗಾಗಿ ಟಾಟಾಎಸ್ ವಾಹನದ ವಿಮೆ ಪಡೆಯುವುದಕ್ಕಾಗಿ ತಪ್ಪು ಮಾಡದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಮಾಧವ ನಾಯಕ ದೂರಿದ್ದಾರೆ. `ಡಿವೈಎಸ್ಪಿ ಅಶ್ವಿನಿ ಅವರು ಅಧೀನ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಇನ್ಸುರೆನ್ಸ ಕಂಪನಿ ಹಾಗೂ ಸರ್ಕಾರಕ್ಕೆ ಮೋಸವಾಗಲಿದ್ದು, ತಪ್ಪು ಮಾಡಿದ ಎಲ್ಲಾ ಅಧಿಕಾರಿಗಳಿಗೂ ಶಿಕ್ಷೆಯಾಗಬೇಕು’ ಎಂದು ಮಾಧವ ನಾಯಕ ಆಗ್ರಹಿಸಿದ್ದಾರೆ.