`ಉತ್ತರ ಕನ್ನಡ ಜಿಲ್ಲೆಯ ವಿವಿಧ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ ವ್ಯಾಪ್ತಿಯ ಅನಧಿಕೃತ ಆಸ್ತಿಗಳಿಗೆ ಸಹ ಇ-ಖಾತಾ ನೀಡಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಸೂಚನೆ ನೀಡಿದ್ದಾರೆ. `ಇದಕ್ಕಾಗಿ ಮೂರು ತಿಂಗಳ ಕಾಲ ಅಭಿಯಾನ ನಡೆಸಬೇಕು. ಜೊತೆಗೆ ಅರ್ಜಿ ಸಲ್ಲಿಸಿದ 7 ದಿನದ ಒಳಗೆ ಇ-ಖಾತಾ ದಾಖಲೆ ಒದಗಿಸಬೇಕು’ ಎಂದವರು ಸೂಚಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಂಗಳವಾರ ವಿಡಿಯೋ ಕಾನ್ಪರೆನ್ಸ ನಡೆಸಿದ ಡೀಸಿ ಲಕ್ಷ್ಮೀಪ್ರಿಯಾ ಅದಾದ ನಂತರ ಅಧೀನ ಅಧಿಕಾರಿಗಳಿಗೆ ತಮ್ಮ ಸೂಚನೆ ಪ್ರಕಟಿಸಿದರು. `ರಾಜ್ಯದಲ್ಲಿರುವ ಎಲ್ಲಾ ಅನಧಿಕೃತ ಆಸ್ತಿಗಳಿಗೆ ಸಹ ಇ-ಖಾತಾ ನೀಡಲು ಸರ್ಕಾರವು ಕಾಯ್ದೆ ಮತ್ತು ನಿಯಮಾವಳಿಗಳಿಗೆ ತಿದ್ದುಪಡಿ ತಂದಿದೆ. ಅನಧಿಕೃತ ಆಸ್ತಿಗಳ ಸ್ವತ್ತಿನ ಮಾಲೀಕರಿಂದ ಅಗತ್ಯ ದಾಖಲೆಗಳನ್ನು ಸ್ವೀಕರಿಸಿ ಸಕಾಲ ತಂತ್ರಾAಶದ ಮೂಲಕ 7 ದಿನದ ಒಳಗಾಗಿ ಇ-ಖಾತಾ ನೀಡಬೇಕು’ ಎಂದವರು ತಿಳಿಸಿದರು. ಈ ಕಾರ್ಯಕ್ಕಾಗಿ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಹಾಯವಾಣಿ ತೆರೆಯುವಂತೆಯೂ ಸೂಚನೆ ನೀಡಿದರು.
`ನಗರಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಅನಧಿಕೃತ ಆಸ್ತಿಗಳನ್ನು ಗುರುತಿಸುವ ಕಾರ್ಯವನ್ನು 2 ದಿನಗಳ ಒಳಗೆ ಮಾಡಬೇಕು. ಇದಕ್ಕಾಗಿ ಹೆಸ್ಕಾಂ ಮತ್ತು ಕಂದಾಯ ಇಲಾಖೆಯಲ್ಲಿರುವ ದತ್ತಾಂಶಗಳ ಮಾಹಿತಿಯನ್ನು ಪಡೆದು ಪರಿಶೀಲಿಸಬೇಕು’ ಎಂದರು. `ಇ-ಖಾತಾ ನೀಡುವ ಕಾರ್ಯದಲ್ಲಿ ಯಾವುದೇ ಹಂತದಲ್ಲೂ ಮಧ್ಯವರ್ತಿಗಳ ಹಾವಳಿ ಕಂಡು ಬರದಂತೆ ನೋಡಿಕೊಳ್ಳಬೇಕು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. `ಇ – ಖಾತಾ ನೀಡುವ ಕಾರ್ಯ ಸಂಪೂರ್ಣವಾಗಿ ಮುಗಿದ ನಂತರ ಎಲ್ಲಾ ನಗರಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅನಧಿಕೃತ ಆಸ್ತಿಗಳು ಇಲ್ಲವೆಂದು ದೃಢೀಕರಣ ನೀಡಬೇಕು. ಇದರ ನಂತರವೂ ಅನಧಿಕೃತ ಬಡಾವಣೆಗಳು ಕಂಡು ಬಂದಲ್ಲಿ ಸಂಬAಧಪಟ್ಟ ಎಲ್ಲಾ ಅಧಿಕಾರಿಗಳು ಜವಾಬ್ದಾರರಾಗಲಿದ್ದು, ಅಂತಹ ಅಧಿಕಾರಿಗಳ ವಿರುದ್ದ ನಾಗರೀಕಾ ಸೇವಾ ನಿಯಮಗಳನ್ವಯ ಶಿಸ್ತು ಕ್ರಮ ಮಾತ್ರವಲ್ಲದೇ ದಂಡ ಮತ್ತು ಸೆರೆವಾಸದ ಶಿಕ್ಷೆಯನ್ನೂ ಕೂಡಾ ವಿಧಿಸಲಾಗುತ್ತದೆ’ ಎಂದು ಎಚ್ಚರಿಸಿದರು.