ಶಾಂತಿ ಸಂಕೇತವಾದ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಿದರು. ಈ ನಡುವೆ ಶಿರಸಿಯ ಡಾ ಮುಕ್ತ್ಯಾರ ಅಹಮ್ಮದ ಅವರು ಈ ದಿನ ರಕ್ತದಾನ ಮಾಡುವ ಮೂಲಕ ಪುಣ್ಯ ಕಾರ್ಯವನ್ನು ನೆರವೇರಿಸಿದರು.
ಡಾ ಮುಕ್ತ್ಯಾರ ಅಹಮ್ಮದ ಅವರು ಕಳೆದ 32 ವರ್ಷಗಳಿಂದ ಶಿರಸಿಯ ಹುಬ್ಬಳ್ಳಿ ರಸ್ತೆಯಲ್ಲಿ ತಾರಾನಾಥ ಕ್ಲಿನಿಕ್ ಎಂಬ ಆಸ್ಪತ್ರೆ ನಡೆಸುತ್ತಿದ್ದಾರೆ. ಜನ ಜಾಗೃತಿ ಜೊತೆ ಸಾಮಾಜಿಕ ಚಟುವಟಿಕೆಗಳಲ್ಲಿ ಸಹ ತೊಡಗಿರುವ ಅವರು ಪ್ರತಿ ವರ್ಷ ಈದ್ ಮಿಲಾದ್ ಹಬ್ಬದ ದಿನ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಾರೆ. ಕಳೆದ 8 ವರ್ಷಗಳಿಂದ ಅವರು ಈ ದಿನ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತ ಬಂದಿದ್ದಾರೆ.
ಈಚೆಗೆ ರಕ್ತದಾನ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿರುವುದರಿಂದ ಜನ ಸಾವು ನೋವಿನಿಂದ ಬಳಲುತ್ತಿರುವ ಬಗ್ಗೆ ಅರಿತ ಅವರು ಪೈಂಗoಬರ್ ಅವರು ಹುಟ್ಟಿದ ದಿನ ರಕ್ತದಾನ ಮಾಡುವ ಬಗ್ಗೆ ನಿರ್ಣಯಿಸಿದರು. ಅದರಂತೆ ಸೋಮವಾರ ನೇರವಾಗಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಿದರು. ಅದಾದ ನಂತರ ಸಾಮೂಹಿಕ ಮೆರವಣಿಗೆ ಹಾಗೂ ಪ್ರಸಾದ ಬೋಜನ ಕಾರ್ಯಕ್ರಮದಲ್ಲಿ ಅವರು ಭಾಗಿಯಾದರು.
`ರಕ್ತದಾನದ ಬಗ್ಗೆ ಅನೇಕರಲ್ಲಿ ತಪ್ಪು ತಿಳುವಳಿಕೆಯಿದೆ. ಇದನ್ನು ಹೋಗಲಾಡಿಸುವ ದೃಷ್ಠಿಯಿಂದ ರಕ್ತದಾನ ಮಾಡಿದ್ದು, ಮುಂದಿನ ಈದ್ ಮಿಲಾದ್ ಹಬ್ಬದಂದು ಇನ್ನಷ್ಟು ಜನ ರಕ್ತದಾನಕ್ಕೆ ಮುಂದಾಗಬೇಕು ಎಂಬುದೇ ನನ್ನ ಬಯಕೆ’ ಎಂದವರು ಅನಿಸಿಕೆ ಹಂಚಿಕೊoಡರು. `ಸುಖ-ಶಾಂತಿಗಾಗಿ ಪ್ರಾಥಿಸಿ ಈದ್ ಮಿಲಾದ್ ಹಬ್ಬ ಆಚರಿಸಲಾಗುತ್ತದೆ. ಇಂಥ ಹಬ್ಬದ ದಿನ ರಕ್ತದಾನದಂಥಹ ಉತ್ತಮ ಕೆಲಸ ಮಾಡಿದರೆ ಅದೇ ದೇವರಿಗೆ ಸಲ್ಲಿಸುವ ಕಾಣಿಕೆ’ ಎಂದವರು ಅಭಿಪ್ರಾಯಪಟ್ಟರು.