ಯಲ್ಲಾಪುರ: ಪಟ್ಟಣ ಪಂಚಾಯತದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಬೇರಿ ಬಾರಿಸಿದೆ.
ಯಲ್ಲಾಪುರ ಪಟ್ಟಣ ಪಂಚಾಯತದ ಗಣಪತಿಗಲ್ಲಿ ವಾರ್ಡಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗುರು ಗೋಸಾವಿ ಅವರು ಗೆಲುವು ಸಾಧಿಸಿದ್ದಾರೆ. ಈ ಹಿಂದೆ ಸಹ ಇಲ್ಲಿ ಕಾಂಗ್ರೆಸ್ ಸದಸ್ಯರಿದ್ದು, ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು. ಬಿಜೆಪಿಯಿಂದ ಪ್ರಕಾಶ ಗೋಸಾವಿ ಹಾಗೂ ಕಾಂಗ್ರೆಸ್ಸಿನಿoದ ಗುರು ಗೋಸಾವಿ ಸ್ಪರ್ಧೆಯಲ್ಲಿದ್ದರು.
ಈ ಪೈಕಿ ಪ್ರಕಾಶ ಗೋಸಾವಿ 162 ಮತ ಪಡೆದರು. ಗುರು ಗೋಸಾವಿ 244 ಮತ ಪಡೆದು ಗೆಲುವು ಸಾಧಿಸಿದರು. 2 ಮತಗಳು ನೋಟಾ ಪಾಲಾಗಿದ್ದವು. ಪಟ್ಟಣ ಪಂಚಾಯತದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಇನ್ನೊಂದು ಸ್ಥಾನ ಗೆಲುವಿನ ಕಾರಣ ಆಡಳಿತ ಪಕ್ಷಕ್ಕೆ ಇನ್ನಷ್ಟು ಶಕ್ತಿ ಬಂದಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ವಿವಿಧ ಕಡೆ ಪಟಾಕಿ ಸಿಡಿಸಿ ಸಡಗರ ವ್ಯಕ್ತಪಡಿಸಿದರು.