ಕಾರವಾರ: ಮನೆಗೆ ವಿದ್ಯುತ್ ಸಂಪರ್ಕ ಮರು ಜೋಡಣೆ ವೇಳೆ ಹೆಸ್ಕಾಂ ಸಿಬ್ಬಂದಿ ಮುನ್ನಚ್ಚರಿಕಾ ಕ್ರಮವಹಿಸದ ಕಾರಣ ಶಿಕ್ಷಕಿಯೊಬ್ಬರು ಬೈಕಿನಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಮನೆ ಮಾಲಕಿ ಹಾಗೂ ಹೆಸ್ಕಾಂ ಲೈನ್ಮೆನ್ ಸೇರಿ ಗಾಯಗೊಂಡ ಶಿಕ್ಷಕಿ ವಿರುದ್ಧವೂ ಪೊಲೀಸ್ ದೂರು ದಾಖಲಾಗಿದೆ.
ಕಾರವಾರ ನಂದನಗದ್ದಾ ಬಾಡದ ಐಟಿಐ ಕಾಲೇಜು ಬಳಿಯ ಕಳೆಶಟ್ಟಾದಲ್ಲಿ ಮನೆ ಹೊಂದಿರುವ ಅನೀತಾ ಫ್ರಾನ್ಸಿಸ್ ವಿದ್ಯುತ್ ಸಂಬoಧಿ ಕೆಲಸ ಮಾಡುವ ಬಗ್ಗೆ ತಿಳಿಸಿದ್ದರು. ಅವರ ಮನೆಗೆ ಸಂಪರ್ಕ ಕಲ್ಪಿಸುವ ಸರ್ವೀಸ್ ಲೈನ್ ಜೋತು ಬಿದ್ದಿದ್ದು, ಅದನ್ನು ಸರಿಪಡಿಸುವಂತೆ ಅವರು ಕೋರಿದ್ದರು. ಈ ಹಿನ್ನಲೆ ಡಿ 16ರ ಸಂಜೆ ಹೆಸ್ಕಾಂ ಸಿಬ್ಬಂದಿ ಶರಣಪ್ಪಾ ಗುಣಿಬಿಂಜಿ ಈ ಕೆಲಸ ಮಾಡುತ್ತಿದ್ದರು. ಈ ವೇಳೆ ವಿದ್ಯುತ್ ತಂತಿಗಳು ರಸ್ತೆ ನಡುವೆ ಬಂದಿದ್ದು, ಇದಕ್ಕೆ ಸ್ಕೂಡಿ ಗುದ್ದಿದ ಸೆಂಟ್ ಜೋಸೆಪ್ ಕಾಲೇಜಿನ ಶಿಕ್ಷಕಿ ವಿನುತಾ ತಳ್ಳೇಕರ್ ನೆಲಕ್ಕೆ ಬಿದ್ದು ಗಾಯಗೊಂಡರು.
ರಸ್ತೆಯಲ್ಲಿ ವಿದ್ಯುತ್ ತಂತಿ ಜೋತು ಬಿದ್ದಿದ್ದರೂ ಆ ಬಗ್ಗೆ ಯಾರೂ ಎಚ್ಚರಿಕೆ ನೀಡಲಿಲ್ಲ. ಈ ಸ್ಥಳದಲ್ಲಿ ಯಾವುದೇ ಸೂಚನಾ ಫಲಕ ಅಳವಡಿಸಿರಲಿಲ್ಲ. ಇದರಿಂದ ಅವರು ಅಪಘಾತಕ್ಕೀಡಾದರು. ಈ ಅಪಘಾತದಲ್ಲಿ ವಿನುತಾ ಅವರ ಹಣೆ, ಕಣ್ಣು, ಮೈ-ಕೈಗಳಿಗೆ ಗಾಯವಾಗಿದೆ. ಮನೆ ಮಾಲಕಿ, ಹೆಸ್ಕಾಂ ಸಿಬ್ಬಂದಿ ಜೊತೆ ಶಿಕ್ಷಕಿ ವೇಗವಾಗಿ ಬೈಕ್ ಓಡಿಸಿರುವುದು ಸಹ ಇದಕ್ಕೆ ಕಾರಣ ಎಂದು ಕೋಡಿಭಾಗದ ರಾಘವೇಂದ್ರ ನಾಯ್ಕ ಈ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ.