ಮುoಡಗೋಡ: ಬ್ಯಾನಳ್ಳಿಯ ತೋಟಗಳಿಗೆ ಲಗ್ಗೆಯಿಟ್ಟಿರುವ ಕಾಡಾನೆಗಳ ಗುಂಪು ಅಲ್ಲಿನ ಅಡಿಕೆ ಗಿಡಗಳನ್ನು ಮುರಿದು ನಾಶ ಮಾಡಿವೆ. 35ಕ್ಕೂ ಅಧಿಕ ಗಿಡಗಳು ಆನೆ ದಾಳಿಗೆ ತತ್ತರಿಸಿವೆ.
ಶನಿವಾರ ರಾತ್ರಿ ಬ್ಯಾನಳ್ಳಿ ಕಾಡಿನ ಮೂಲಕ ಈ ಆನೆಗಳು ಊರು ಪ್ರವೇಶಿಸಿದವು. ಭಾನುವಾರ ಬೆಳಗ್ಗೆ ಅವಧಿಯಲ್ಲಿ ತೋಟಗಳನ್ನು ನಾಶ ಮಾಡಿದ್ದು, ಒಂದು ದಿನ ಬಿಟ್ಟು ಇನ್ನೊಂದು ದಿನದಂತೆ ಕಾಣಿಸಿಕೊಳ್ಳುತ್ತಿವೆ. ಅಡಿಕೆ ತೋಟದ ಜೊತೆ ಭತ್ತದ ಗದ್ದೆಗಳಿಗೆ ಸಹ ಆನೆ ದಾಳಿ ನಡೆದಿದೆ.
`ಕಳೆದ ವರ್ಷ ಈ ಪ್ರಮಾಣದಲ್ಲಿ ಆನೆ ದಾಳಿ ಆಗಿರಲಿಲ್ಲ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದ್ದು, ಫಸಲು ಕೈಗೆ ಸಿಗುವುದು ಅನುಮಾನ’ ಎಂದು ರೈತರು ಅಳಲು ತೋಡಿಕೊಂಡರು.
`ಗಜಪಡೆಯ ಹಿಂಡಿನಲ್ಲಿ ಮರಿ ಆನೆಗಳು ಇವೆ. ಅವನ್ನು ಓಡಿಸಲು ಹೋದರೆ ಆಕ್ರಮಣ ಮಾಡುವ ಸಾಧ್ಯತೆ ಹೆಚ್ಚು. ಹೀಗಾಗಿ ಸುಮ್ಮನಿದ್ದೇವೆ’ ಎಂದು ಮತ್ತೊಬ್ಬರು ಹೇಳಿದರು. ಇದೀಗ ಬ್ಯಾನಳ್ಳಿ ಗ್ರಾಮದ ನಾಗರಾಜ ಕಾತ್ರಟ್, ಬಾಗು ಲಾಂಬೋರೆ ಅವರ ತೋಟದಲ್ಲಿ ಕಾಡಾನೆಗಳು ದಾಳಿ ಮಾಡಿ ಬೆಳೆ ಹಾನಿ ಮಾಡಿವೆ.
ಈ ಭಾಗದಲ್ಲಿ ಆನೆಗಳ ಸಂಚಾರಕ್ಕೆ ಕಡಿವಾಣ ಹಾಕಲು ಕಳೆದ 5 ವರ್ಷಗಳ ಹಿಂದೆ ಆನೆ ಅಗಳ ತೆಗೆದಿದ್ದು, ಮಳೆಗಾಲದಿಂದ ಮಣ್ಣು ಕುಸಿದು ಅಗಳ ಮಾಯವಾಗಿದೆ. ಹೀಗಾಗಿ ಆನೆಗಳು ನಾಡಿಗೆ ಬರುತ್ತಿದ್ದು, ಆನೆ ಅಗಳವನ್ನು ಆಳ ಮಾಡಬೇಕು ಎಂದು ಜನ ಆಗ್ರಹಿಸಿದ್ದಾರೆ.