ಬೆಂಗಳೂರು: ರಾಜ್ಯದಲ್ಲಿ ಈಚೆಗೆ ಆನೆಗಳ ಅಸಹಜ ಸಾವುಗಳ ಕುರಿತು ಮಾಧ್ಯಮ ವರದಿ ಗಮನಿಸಿದ ಹೈಕೋರ್ಟ್ ಈ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.
ಈಚೆಗೆ ದಸರಾ ಆನೆ ಅಶ್ವತ್ಥಾಮ ವಿದ್ಯುತ್ ಸ್ಪರ್ಶದಿಂದ ಸಾವನಪ್ಪಿತ್ತು. ಇದಲ್ಲದೇ ಇನ್ನೂ ಅನೇಕ ವನ್ಯಜೀವಿಗಳ ಅಸಹಜ ಸಾವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್ ವನ್ಯಜೀವಿಗಳ ಸುರಕ್ಷತೆ ಮತ್ತು ರಕ್ಷಣೆ ಕುರಿತಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪ್ರತಿಕ್ರಿಯೆ ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಎನ್ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆವಿ ಅರವಿಂದ್ ಅವರಿದ್ದ ವಿಭಾಗೀಯ ಪೀಠವು ಈ ಕುರಿತು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಅಱಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
`ರಾಜ್ಯದಲ್ಲಿ ವಿದ್ಯುತ್ ಸ್ಪರ್ಶದಿಂದ ಅಥವಾ ಇತರ ಅಸ್ವಾಭಾವಿಕ ಕಾರಣಗಳಿಂದಾಗಿ ವಿವಿಧ ಪ್ರದೇಶಗಳಲ್ಲಿ ಆನೆಗಳು ಸಾವಿಗೀಡಾಗುತ್ತಿರುವ ಸತತ ಮತ್ತು ಪುನರಾವರ್ತಿತ ಘಟನೆಗಳು ಚಿಂತಿಸಬೇಕಾದ ಗಂಭೀರ ವಿಷಯವಾಗಿದೆ. ನಿರ್ದಿಷ್ಟವಾಗಿ ಆನೆಗಳು ಮತ್ತು ವನ್ಯಜೀವಿಗಳಿಗೆ ಸುರಕ್ಷತೆಯನ್ನು ಖಾತರಿಪಡಿಸುವ ಉಸ್ತುವಾರಿ ವಹಿಸಿರುವ ಅಧಿಕಾರಿಗಳ ಶ್ರದ್ಧೆಯ ಕೊರತೆಯಿಂದ ಇಂಥ ದುರಂತ ನಡೆಯುತ್ತಿದೆ’ ಎಂದು ನ್ಯಾಯಾಲಯ ಹೇಳಿದೆ.
Discussion about this post