ಸಾರ್ವಜನಿಕ ರಸ್ತೆ ಹಾಗೂ ಪಾದಚಾರಿ ಮಾರ್ಗ ಅತಿಕ್ರಮಿಸಿ ಅಂಗಡಿ ನಿರ್ಮಿಸಿಕೊಂಡಿದ್ದವರಿಗೆ ವಿವಿಧ ಇಲಾಖೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟು ತೆರವು ಮಾಡದೇ ಇದ್ದಲ್ಲಿ ಪಟ್ಟಣ ಪಂಚಾಯತದಿoದಲೇ ತೆರವು ಕಾರ್ಯಾಚರಣೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಯಲ್ಲಾಪುರ ಪಟ್ಟಣದಲ್ಲಿ ರಾ ಹೆದ್ದಾರಿ, ಪೊಲೀಸ್ ಹಾಗೂ ಪಟ್ಟಣ ಪಂಚಾಯತ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದರು. ಬಿಸಗೋಡು ಕ್ರಾಸಿನಿಂದ ಮಾಗೋಡು ಕ್ರಾಸಿನವರೆಗೆ ರಸ್ತೆ ಹಾಗೂ ಪಾದಚಾರಿ ಮಾರ್ಗ ಅತಿಕ್ರಮಿಸಿ ಅಂಗಡಿ ನಿರ್ಮಿಸಿದವರಿಗೆ ತಿಳುವಳಿಕೆ ಮೂಡಿಸಿದರು.
`ಅತಿಕ್ರಮಣ ಅಂಗಡಿಗಳಿAದ ಅಪಘಾತ ಸಾಧ್ಯತೆ ಹೆಚ್ಚಿದೆ. ಶಾಲಾ ಮಕ್ಕಳ ಜೊತೆ ಸಾರ್ವಜನಿಕರ ಓಡಾಟಕ್ಕೂ ಇದರಿಂದ ಸಮಸ್ಯೆಯಾಗಿದೆ. ಹೀಗಾಗಿ ಕೂಡಲೇ ಅತಿಕ್ರಮಣ ಅಂಗಡಿ ಮುಂಗಟ್ಟು ತೆರವು ಮಾಡಬೇಕು’ ಎಂದು ಸೂಚಿಸಿದರು.
ಕೆಲ ಅಂಗಡಿಕಾರರು ಅಧಿಕಾರಿಗಳ ಮಾತು ಆಲಿಸಿ ಜಾಗ ಖಾಲಿ ಮಾಡಿದರು. ಇನ್ನು ಕೆಲವರು ಸಣ್ಣದಾಗಿ ಬೈದುಕೊಂಡರು. ಹಲವರು ಅಧಿಕಾರಿಗಳ ಮಾತಿಗೆ ಹೆಚ್ಚಿನದಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ಅದಾಗಿಯೂ ಪೊಲೀಸರು ವಿವಿಧ ಕಡೆ ಸಂಚರಿಸಿ ಜಾಗೃತಿ ಮೂಡಿಸಿದ್ದು, ಅಪಾಯದ ರೀತಿಯಲ್ಲಿದ್ದ ಅಂಗಡಿಗಳನ್ನು ತೆರವು ಮಾಡಿಸಿದರು.
`ಅತಿಕ್ರಮಣ ಅಂಗಡಿಕಾರರು ಸ್ವಯಂ ಪ್ರೇರಣೆಯಿಂದ ತೆರವು ನಡೆಸಬೇಕು. ಇಲ್ಲವಾದಲ್ಲಿ ಪಟ್ಟಣ ಪಂಚಾಯತ ನಡೆಸುವ ಕಾರ್ಯಾಚರಣೆಯಲ್ಲಿ ಅಂಗಡಿಗಳಿಗೆ ಹಾನಿಯಾದರೆ ಅದನ್ನು ಪ್ರಶ್ನಿಸುವ ಹಾಗಿಲ್ಲ’ ಎಂದು ಪ ಪಂ ಅಧಿಕಾರಿಗಳು ಸೂಚನೆ ನೀಡಿದರು.