ಕಾರವಾರದ ಶಿರವಾಡದಿಂದ ಗುಜುರಿ ವ್ಯಾಪಾರಿಯನ್ನು ಅಪಹರಿಸಿದ್ದ ಐದು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಹರಣಕ್ಕೆ ಒಳಗಾದ ಗುಜುರಿ ವ್ಯಾಪಾರಿಯನ್ನು ರಕ್ಷಿಸಿ ಅವರ ಕುಟುಂಬದವರೊಡನೆ ಕಳುಹಿಸಿಕೊಟ್ಟದ್ದಾರೆ.
ಕಾರವಾರ ಕಾಜುಭಾಗದ ವಕೀಲೆ ನಫಿಸಾ ಮಜೀದ್ ಅವರು ತಮ್ಮ ಪತಿ ಅಬ್ದುಲ್ ಮಜೀದ್ರನ್ನು ಅಪಹರಣವಾಗಿರುವ ಬಗ್ಗೆ ಫೆ 22ರಂದು ಪೊಲೀಸ್ ದೂರು ನೀಡಿದ್ದರು. ಬೈಂದೂರಿನಲ್ಲಿ ಗುಜುರಿ ವ್ಯಾಪಾರ ಮಾಡಿಕೊಂಡಿರುವ ಅವರನ್ನು ದುಷ್ಕರ್ಮಿಗಳು ಅಪಹರಿಸಿದ ಬಗ್ಗೆ ಅವರು ವಿವರಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ನೆರೆ ಜಿಲ್ಲೆ ಪೊಲೀಸರ ನೆರವು ಯಾಚಿಸಿದರು.
ಮಂಗಳೂರು ಐಜಿಪಿ ಅಮಿತ್ ಸಿಂಗ್, ಕಾರವಾರ ಎಸ್ಪಿ ಎಂ ನಾರಾಯಣ ಜೊತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಅಪಹರಣಕಾರರ ಪತ್ತೆಗೆ ವಿಶೇಷ ತಂಡ ರಚಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ಎಂ, ಡಿವೈಎಸ್ಪಿ ಎಸ್ ವಿ ಗಿರೀಶ್, ಸಿಪಿಐ ಯು ಎಸ್ ಸಾತನಳ್ಳಿ ಹಾಗೂ ಪಿಎಸ್ಐ ಮಂಜುನಾಥ ಪಾಟೀಲ್ ಪ್ರಕರಣದ ಕಾರ್ಯಾಚರಣೆಗಿಳಿದರು. ಅಪಹರಣಕ್ಕೆ ಒಳಗಾದ ಅಬ್ದುಲ್ ಮಜೀದ್ ಅವರನ್ನು ಮೂಡಬಿದರೆಯಲ್ಲಿ ಪತ್ತೆ ಹಚ್ಚಿ ಅವರ ಕುಟುಂಬದವರಿಗೆ ಒಪ್ಪಿಸಿದರು.
ಇನ್ನೂ ಅಪಹರಣ ಮಾಡಿದ ಮಂಗಳೂರಿನ ಲಾರಿ ಚಾಲಕ ಯುಸುಫ್, ಮೂಡಬಿದ್ರೆಯ ಗುಜುರಿ ವ್ಯಾಪಾರಿ ಮಹಮದ್ ರಿಯಾಜ್, ಮಂಗಳೂರಿನ ಮರಳು ವ್ಯಾಪಾರಿ ಮಹಮದ್ ರಾವುಪ್, ಕಟ್ಟಡ ಸಾಮಗ್ರಿ ಪೂರೈಕೆದಾರ ಅಬ್ಬುಕರ್ ಸಿದ್ಧಿಕ್ ಹಾಗೂ ಸಿದ್ದರದ ಗಣೇಶ ಕೋಳಂಬಕರ್’ರನ್ನು ಬಂಧಿಸಿದರು. ಇನ್ನೂ ನಾಲ್ವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರ ಹುಡುಕಾಟ ಮುಂದುವರೆದಿದೆ.