ವರ್ಷದಿಂದ ವರ್ಷಕ್ಕೆ ಅಡಿಕೆ ಬೆಳೆ ವಿಸ್ತಾರವಾಗುತ್ತಿದೆ. ಸಾಂಪ್ರದಾಯಿಕ ಅಡಿಕೆ ಬೆಳೆಗಾರರ ನಡುವೆ ಬಯಲು ಸೀಮೆ ಜನ ವ್ಯಾಪಕ ಪ್ರಮಾಣದಲ್ಲಿ ಅಡಿಕೆ ತೋಟ ನಿರ್ಮಿಸುತ್ತಿದ್ದಾರೆ.
ಕರ್ನಾಟಕ ರಾಜ್ಯದ 10 ಜಿಲ್ಲೆಗಳಲ್ಲಿ 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ವಾರ್ಷಿಕ 11 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗುತ್ತಿದೆ. ಈ ನಡುವೆ ಎಲೆಚುಕ್ಕಿ ರೋಗ, ಹಳದಿ ರೋಗ ಸೇರಿ ನಾನಾ ರೋಗಗಳು ಅಡಿಕೆ ಮರಗಳನ್ನು ಕಾಡುತ್ತಿದೆ. ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಅಡಿಕೆಗೆ ವೈಜ್ಞಾನಿಕ ಬೆಲೆ ನಿಗದಿ, ರೋಗ ನಿಯಂತ್ರಣ, ನಷ್ಟ ಪರಿಹಾರಕ್ಕೆ ಈವರೆಗೂ ಸೂಕ್ತ ವೇದಿಕೆ ಸಿಕ್ಕಿಲ್ಲ. ದೊಡ್ಡ ಪ್ರಮಾಣದಲ್ಲಿ ಚರ್ಚೆಯೂ ನಡೆದಿಲ್ಲ.
ಅಡಿಕೆ ಕೃಷಿ ವಿಸ್ತರಣೆ ಹಾಗೂ ಅಡಿಕೆ ಬೆಳೆಗಾರರ ಸಮಸ್ಯೆ ಬಗೆಹರಿಸುವುದಕ್ಕಾಗಿ ಪ್ರತ್ಯೇಕ ಅಡಿಕೆ ಮಂಡಳಿ ಸ್ಥಾಪಿಸಬೇಕು ಎಂಬ ಕೂಗು ದಶಕಗಳಿಂದಲೂ ಇದೆ. ಆದರೆ, ಯಾವ ಸರ್ಕಾರವೂ ಇದಕ್ಕೆ ಆಸಕ್ತಿವಹಿಸಿಲ್ಲ. ಅಡಿಕೆ ಬೆಳೆಗಾರರ ಹಿತ ಕಾಪಾಡುವ ಮಹತ್ವದ ನಿರ್ಣಯಗಳನ್ನು ಸರ್ಕಾರ ಕೈಗೊಂಡಿಲ್ಲ. ರಾಜ್ಯ ಸರ್ಕಾರದ ಜೊತೆ ಕೇಂದ್ರ ಸರ್ಕಾರ ಸಹ ಅಡಿಕೆ ಬೆಳೆಗಾರರ ಪರವಾಗಿಲ್ಲ ಎಂಬುದು ಸರ್ಕಾರದ ಮೌನ ನಡೆಗಳಿಂದ ಋಜುವಾತಾಗಿದೆ.
ಅಡಿಕೆ ಬೆಳೆಗಾರರ ಪ್ರದೇಶದ ಯಾವ ಸಂಸದರೂ ಅಡಿಕೆ ಮಂಡಳಿ ಸ್ಥಾಪನೆ ಹಾಗೂ ಅದರಿಂದಾಗುವ ಪ್ರಯೋಜನಗಳ ಬಗ್ಗೆ ಸರ್ಕಾರದ ಮುಂದೆ ಮಾತನಾಡಿಲ್ಲ. ಆದರೆ, ರಾಯಚೂರಿನ ಸಂಸದ ಜಿ ಕುಮಾರ ನಾಯಕ ಅಡಿಕೆ ಮಂಡಳಿ ಸ್ಥಾಪನೆ ವಿಷಯವಾಗಿ ಲೋಕಸಭೆಯಲ್ಲಿ ಧ್ವನಿ ಎತ್ತಿದ್ದಾರೆ. ಕೇಂದ್ರ ಸರ್ಕಾರ ಅವರ ಪ್ರಶ್ನೆಗೆ ಯಾವುದೇ ಉತ್ತರ ನೀಡಿಲ್ಲ. ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವರಿಗೆ ಅಡಿಕೆ ಮಂಡಳಿ ಕುರಿತು ಅವರು ಪ್ರಶ್ನಿಸಿದ್ದು, ಈ ವೇಳೆ ಅಡಿಕೆ ಬೆಳೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮಾತ್ರ ಉತ್ತರ ಸಿಕ್ಕಿದೆ. ಅವರ ಮುಖ್ಯ ಪ್ರಶ್ನೆಯಾದ ಮಂಡಳಿ ಸ್ಥಾಪನೆ ಬೇಡಿಕೆ ಬಗ್ಗೆ ಒಂದೇ ಒಂದು ಆಶ್ವಾಸನೆಯೂ ದೊರೆತಿಲ್ಲ.
`2024-25ನೇ ಸಾಲಿನಲ್ಲಿ ಅಡಿಕೆ ಎಲೆಚುಕ್ಕೆ ರೋಗ ನಿರ್ವಹಣೆಗೆ ಕೇಂದ್ರ ಕೃಷಿ ಸಚಿವಾಲಯವು ರಾಜ್ಯಕ್ಕೆ 37 ಕೋಟಿ ರೂ ಬಿಡುಗಡೆ ಮಾಡಿದೆ. ಹವಾಮಾನ ಬೆಳೆ ಆಧಾರಿತ ವಿಮಾ ಯೋಜನೆ ಅಡಿಯಲ್ಲಿ ಅಡಿಕೆ ಬೆಳೆಯನ್ನು ಸೇರಿಸಲಾಗಿದೆ’ ಎಂಬ ಉತ್ತರ ಮಾತ್ರ ಸಿಕ್ಕಿದೆ. ಇನ್ನೂ ಈ ವರ್ಷ ವಿಮಾ ಯೋಜನೆಯ ಅಡಿ ಬೆಳೆಗಾರರಿಗೆ ಸಿಕ್ಕ ಪರಿಹಾರದ ಕಥೆ ಎಲ್ಲರಿಗೂ ಗೊತ್ತಿದೆ!