63 ವರ್ಷದ ವಿಮಲಾ ಶಿರಾಲಿ ಅವರು ಮಾಸಿಕ 600 ರೂ ಪಿಂಚಣಿ ಆಸೆಗಾಗಿ ಇಂದಿರಾಗಾoಧಿ ವೃದ್ದಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಕಿಡಿಗೇಡಿಯೊಬ್ಬರ ಪ್ರಭಾವಕ್ಕೆ ಒಳಗಾದ ಗ್ರಾಮ ಆಡಳಿತಾಧಿಕಾರಿ ಚಂದ್ರಶೇಖರ್ ಆ ಯೋಜನೆ ಅವರಿಗೆ ಬಾರದಂತೆ ತಡೆಯುವಲ್ಲಿ ಯಶಸ್ವಿಯಾದರು!
ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಗುಜರಿಗಲ್ಲಿ ದೇವಸ್ಥಾನದ ಬಳಿ ವಿಮಲಾ ಶಿರಾಲಿ ವಾಸವಾಗಿದ್ದಾರೆ. ಅವರಿಗೆ ಸ್ವಂತ ಮನೆಯಿಲ್ಲ. ಜಮೀನು-ಭೂಮಿ ಯಾವುದೂ ಇಲ್ಲ. ಹೀಗಾಗಿ ವಿಮಲಾ ಶಿರಾಲಿ ಅವರ ತಂದೆಯ ಮನೆಯಲ್ಲಿ ಚಿಕ್ಕದೊಂದು ಕೋಣೆ ವಸತಿಗೆ ಸಿಕ್ಕಿದ್ದು, ಪತಿ ದತ್ತಾತ್ರೇಯ ಶಿರಾಲಿ ಜೊತೆ ಅವರು ಅಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. 67 ವರ್ಷದ ದತ್ತಾತ್ರೇಯ ಶಿರಾಲಿ ಕೈಗೆ ಪೆಟ್ಟಾಗಿದ್ದರೂ ವಾರಕ್ಕೆ ಎರಡು ದಿನ ಬಾಡಿಗೆ ರಿಕ್ಷಾ ಪಡೆದು ಅದನ್ನು ಓಡಿಸಿ ಕುಟುಂಬ ಸಲಹುತ್ತಿದ್ದಾರೆ.
ಜನವರಿ 28ರಂದು ವಿಮಲಾ ಶಿರಾಲಿ ಅವರು ಇಂದಿರಾಗಾoಧಿ ವೃದ್ದಾಪ್ಯ ವೇತನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಗ್ರಾಮ ಆಡಳಿತಾಧಿಕಾರಿ ಚಂದ್ರಶೇಖರ್ ಮನೆ ಪರಿಶೀಲನೆಗೆ ಬಂದಿದ್ದರು. ಆಗ, ಇಲಾಖೆಗೆ ಸಂಬoಧವೇ ಇಲ್ಲದ ಇನ್ನೊಬ್ಬ ವ್ಯಕ್ತಿಯನ್ನು ಅವರು ಕರೆ ತಂದಿದ್ದರು. ಆ ಇನ್ನೊಬ್ಬ ವ್ಯಕ್ತಿ `ಇಂದಿರಾಗಾoಧಿ ವೃದ್ದಾಪ್ಯ ವೇತನಕ್ಕೆ ಯಾಕೆ ಅರ್ಜಿ ಸಲ್ಲಿಸಿದ್ದು? ಸಂಧ್ಯಾ ಸುರಕ್ಷಾಗೆ ಸಲ್ಲಿಸು’ ಎಂದು ತಾಕೀತು ಮಾಡಿದ್ದರು. ಗ್ರಾಮ ಆಡಳಿತಾಧಿಕಾರಿ ಸಹ ಅವರ ಮಾತಿಗೆ ತಲೆಯಾಡಿಸಿದ್ದರು. ಅರ್ಜಿ ವಿಷಯವಾಗಿ ವಿವಿಧ ದಾಖಲೆಗಳನ್ನು ಪಡೆದ ಗ್ರಾಮ ಆಡಳಿತಾಧಿಕಾರಿ ತಹಶೀಲ್ದಾರರಿಗೆ ವರದಿ ಸಲ್ಲಿಸಿದ್ದು, ಅದೇ ವರದಿ ಆಧಾರದಲ್ಲಿ ತಹಶೀಲ್ದಾರ್ ವಿಮಲಾ ಶಿರಾಲಿ ಅವರ ಅರ್ಜಿಯನ್ನು ವಜಾ ಮಾಡಿದ್ದಾರೆ. `ದಾಖಲೆಗಳು ತಾಳೆಯಾಗುತ್ತಿಲ್ಲ’ ಎಂಬ ಕಾರಣ ನೀಡಿ ಅವರಿಗೆ ನ್ಯಾಯಯುತವಾಗಿ ಬರಬೇಕಿದ್ದ ಪಿಂಚಣಿ ಹಣವನ್ನು ಬಾರದಂತೆ ತಡೆದಿದ್ದಾರೆ.
ಇನ್ನೂ ವಿಮಲಾ ಶಿರಾಲಿ ಅವರ ಕಾಲು ಈಚೆಗೆ ಮುರಿದಿದೆ. ನೆಂಟರು ನೀಡಿದ ಹಣದಿಂದ ಅವರು ಚಿಕಿತ್ಸೆ ಪಡೆದಿದ್ದು, ಅದಕ್ಕೂ 1.25 ಲಕ್ಷ ರೂ ವೆಚ್ಚವಾಗಿದೆ. ದತ್ತಾತ್ರೇಯ ಶಿರಾಲಿ ಅವರ ಕೈ ಮುರಿದಿದ್ದರೂ ರಿಕ್ಷಾ ಓಡಿಸುವುದು ಅವರಿಗೆ ಅನಿವಾರ್ಯವಾಗಿದೆ. ಹೆತ್ತ ಮಗ ಈ ವೃದ್ಧರನ್ನು ಬಿಟ್ಟು ಬೇರೆ ಮನೆ ಮಾಡಿ ಹಲವು ವರ್ಷ ಕಳೆದಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಅರಿವಿದ್ದರೂ ತಹಶೀಲ್ದಾರ್ ಕಚೇರಿ ಸಿಬ್ಬಂದಿಗೆ ಮನ ಕರಗಿಲ್ಲ. ಪಿಂಚಣಿಯಾಗಿ ಬರಬೇಕಿದ್ದ 600ರೂ ಹಣಕ್ಕೆ ಅವರು ಅಡ್ಡಿ ಮಾಡುವ ಅಗತ್ಯವೂ ಇರಲಿಲ್ಲ.

ಮಾನವ ಹಕ್ಕು ಆಯೋಗಕ್ಕೆ ದೂರು!
ತಮಗಾದ ಅನ್ಯಾಯದ ಬಗ್ಗೆ ವಿಮಲಾ ಶಿರಾಲಿ ಅವರು ಶನಿವಾರ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರಕ್ಕೆ ಭೇಟಿ ನೀಡಿ ಅಳಲು ತೋಡಿಕೊಂಡರು. ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ದಾಖಲೆಗಳನ್ನು ಪರಿಶೀಲಿಸಿದರು. ಎಲ್ಲವೂ ಸರಿಯಿದ್ದರೂ ಯೋಜನೆ ಸಿಗದಂತೆ ನೋಡಿಕೊಂಡ ಅಧಿಕಾರಿಗಳ ವಿರುದ್ಧ ಅವರು ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದರು. ಆಟೋ ಚಾಲಕ ಮುನ್ನಾ ಸಾಬ್, ಸಾಮಾಜಿಕ ಕಾರ್ಯಕರ್ತ ಸುಧಾಕರ್ ನಾಯ್ಕ ಸಹ ವಿಮಲಾ ಶಿರಾಲಿ ಅವರ ಕುಟುಂಬಕ್ಕೆ ಬೆಂಬಲವಾಗಿ ನಿಂತರು.