`ಕಾರವಾರ ಬಾಲಕಿಯರ ಬಾಲ ಮಂದಿರದಲ್ಲಿ ಆತ್ಮಹತ್ಯೆಗೆ ಶರಣಾದ ಬಾಲಕಿ ಸಾವಿಗೆ ನ್ಯಾಯ ಕೊಡಿಸಬೇಕು. ಈ ಸಾವಿಗೆ ನೈಜ ಕಾರಣದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು’ ಎಂದು ಭಂಡಾರಿ ಸಮಾಜೋನ್ನತಿ ಸಂಘ ಆಗ್ರಹಿಸಿದೆ.
ಈ ಕುರಿತು ಸೋಮವಾರ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರನ್ನು ಭೇಟಿ ಮಾಡಿದ ಸಮುದಾಯದ ಪ್ರಮುಖರು `ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ಬಾಲಕಿಯರ ಬಾಲ ಮಂದಿರದಲ್ಲಿನ 10ನೇ ತರಗತಿ ಓದುವ ವಿದ್ಯಾರ್ಥಿನಿಯ ಸಾವಾಗಿದೆ. ಆದರೆ, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಆಕ್ಷೇಪಿಸಿದರು.
`ವಿದ್ಯಾರ್ಥಿನಿ ತಾನಿದ್ದ ಕೋಣೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಬಾಲ ಮಂದಿರದ ವಾರ್ಡನ್ ಹಾಗೂ ಸಿಬ್ಬಂದಿ ನಡವಳಿಕೆ ಇದಕ್ಕೆ ಕಾರಣ ಎಂಬ ಆರೋಪವಿದೆ. ಈ ಬಗ್ಗೆ ವಿದ್ಯಾರ್ಥಿನಿಯ ತಾಯಿ ದೂರು ನೀಡಿದ್ದು, ಸಮಗ್ರ ತನಿಖೆ ನಡೆಯಬೇಕು’ ಎಂದು ಆಗ್ರಹಿಸಿದರು.
`ಅಶ್ವಿನಿ ಅವರು ಕೂಲಿ ಕೆಲಸ ಮಾಡಿ ತಮ್ಮ ನಾಲ್ವರು ಮಕ್ಕಳನ್ನು ಸಾಕುತ್ತಿದ್ದರು. ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎನ್ನುವ ಉದ್ದೇಶದಿಂದ ಪುತ್ರಿಯನ್ನು ಬಾಲಕಿಯರ ಬಾಲಮಂದಿರದಲ್ಲಿರಿಸಿದ್ದರು’ ಎಂದು ವಿವರಿಸಿದರು.