ವೈದ್ಯರೊಬ್ಬರನ್ನು ಬೆದರಿಸಿ ಅವರಿಂದ 2.5 ಲಕ್ಷ ರೂ ವಸೂಲಿಗೆ ಮುಂದಾಗಿದ್ದ ಮೂವರು ನಕಲಿ ಪತ್ರಕರ್ತರಿಗೆ ದಾಂಡೇಲಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಹುಬ್ಬಳ್ಳಿಯಿಂದ ದಾಂಡೇಲಿಗೆ ಬಂದಿದ್ದ ಮೂವರು ಫೆ 9ರಂದು ವೈದ್ಯರೊಬ್ಬರನ್ನು ಭೇಟಿ ಮಾಡಿದ್ದರು. ಪ್ರಕೃತಿ ಚಿಕಿತ್ಸೆ ಮಾಡುವ ಅಶೋಕ ಪರಬ ಅವರ ಬಳಿ `ನೀನು ನಕಲಿ ವೈದ್ಯ’ ಎಂದು ವರದಿ ಪ್ರಸಾರ ಮಾಡುವ ಬಗ್ಗೆ ಬೆದರಿಸಿದ್ದರು. ವರದಿ ಪ್ರಸಾರ ಮಾಡದೇ ಇರಲು 2.5 ಲಕ್ಷ ರೂ ನೀಡುವಂತೆ ಬೇಡಿಕೆ ಒಡ್ಡಿದ್ದರು. ಇದಕ್ಕೆ ಆ ವೈದ್ಯರು ಒಪ್ಪಿರಲಿಲ್ಲ. ಹೀಗಾಗಿ ಯೂಟೂಬ್ ಚಾನಲ್ ಒಂದರಲ್ಲಿ ದಾಂಡೇಲಿ ವೈದ್ಯ ನಕಲಿ ಎಂಬ ಬಗ್ಗೆ ವರದಿಯನ್ನು ಬಿತ್ತರಿಸಿದ್ದರು.
ಅದಾದ ನಂತರ ಮತ್ತೆ ಆ ವೈದ್ಯರನ್ನು ಭೇಟಿ ಮಾಡಿ `ಕಾಸು ಕೊಡದೇ ಇದ್ದರೆ ದೊಡ್ಡ ದೊಡ್ಡ ಚಾನಲ್ಗಳಲ್ಲಿ ಸುದ್ದಿ ಪ್ರಸಾರವಾಗಲಿದೆ’ ಎಂದು ಬೆದರಿಸಿದ್ದರು. ಫೆ 13ರಂದು ಸಹ ದಾಂಡೇಲಿಗೆ ಬಂದು ಹಣಕ್ಕಾಗಿ ಪೀಡಿಸಿದ್ದರು. ಇದಲ್ಲದೇ ಪದೇ ಪದೇ ಫೋನ್ ಮಾಡಿ ಬೆದರಿಸುತ್ತಿದ್ದರು. ಈ ಹಿನ್ನಲೆ ಅಶೋಕ ಅವರು ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ಹುಬ್ಬಳ್ಳಿಯ ವಿಜಯ ಮೇತ್ರಾಣಿ, ಧರ್ಮರಾಜ ಕರಾಠೆ, ಸತೀಶ ಕೇದಾರಿ ಎಂಬಾತರನ್ನು ವಶಕ್ಕೆಪಡೆದು ವಿಚಾರಣೆ ನಡೆಸಿದ್ದಾರೆ.