ಜೊಯಿಡಾ: ಕಂಠಪೂರ್ತಿ ಕುಡಿದು ಬೈಕ್ ಓಡಿಸಿದ ಪ್ರವೀಣ ಎಂಬಾತ ಬೈಕಿನಿಂದ ಬಿದ್ದು ಗಾಯಗೊಂಡಿದ್ದು, `ಪೊಲೀಸರು ಹೊಡೆದಿದ್ದರಿಂದ ಗಾಯಗೊಂಡೆ’ ಎಂದು ಸುಳ್ಳು ಹೇಳಲು ಹೋಗಿ ಸಿಕ್ಕಿಬಿದ್ದಿದ್ದಾನೆ!
ರಾಮನಗರದ ರಾಮಲಿಂಗಾಗಲ್ಲಿಯ ಪ್ರವೀಣ ಮನೋಹರ ಸುಧೀರ ಎಂಬಾತನ ಮೇಲೆ ಪೊಲೀಸರು ನಿಗಾ ಇಟ್ಟಿದ್ದರು. ಆತನನ್ನು ಗಡಿಪಾರು ಮಾಡುವ ಬಗ್ಗೆಯೂ ಪೊಲೀಸರು ಶಿಫಾರಸ್ಸು ಮಾಡಿದ್ದರು. ಈ ಹಿನ್ನಲೆ ಪೊಲೀಸರ ವಿರುದ್ಧ ಕಿಡಿಕಾರುತ್ತಿದ್ದ ಪ್ರವೀಣ ತಾನು ಬೈಕಿನಿಂದ ಬಿದ್ದಿದನ್ನು ಬಂಡವಾಳವನ್ನಾಗಿಸಿಕೊoಡು ಪೊಲೀಸರ ವಿರುದ್ಧ ದೂರು ನೀಡಲು ಮುಂದಾಗಿದ್ದ. ಇದಕ್ಕಾಗಿ ಆತ ಯೋಜನೆ ಸಿದ್ದಪಡಿಸಿಕೊಂಡಿದ್ದು, ಆತನ ಸ್ನೇಹಿತನ ಸಹಕಾರವಿಲ್ಲದೇ ಯೋಜನೆ ತಲೆಕೆಳಗಾಗಿದೆ.
ರಾಮನಗರದ ಸಿದ್ದೇಶ್ವರಗಲ್ಲಿಯ ಸೂರಜ ಮೋಹನ ದೇಸಾಯಿ ಹಾಗೂ ಪ್ರವೀಣ ಮನೋಹರ ಸುಧೀರ ನಿತ್ಯ ಕೆಲಸ ಮುಗಿದ ನಂತರ ಎಂ ಎಸ್ ಐ ಎಲ್ ಬಳಿ ತೆರಳಿ ಸರಾಯಿ ಕುಡಿಯುತ್ತಿದ್ದರು. ಸೆ 20ರಂದು ಸಹ ಈ ಇಬ್ಬರು ಒಟ್ಟಿಗೆ ಕುಡಿದು ಮನೆಗೆ ತೆರಳಿದ್ದಾರೆ. ಸರಾಯಿ ಕುಡಿದು ಬೈಕ್ ಓಡಿಸಿದ ಪ್ರವೀಣ ಬೈಕಿನಿಂದ ಬಿದ್ದು ಗಾಯಗೊಂಡಿದ್ದು, ಸೆ 21ರಂದು ಸಂಜೆ ಈ ಇಬ್ಬರು ಸ್ನೇಹಿತರು ಕುಡಿಯಲು ಸೇರಿದಾಗ ಪೊಲೀಸರ ವಿರುದ್ಧ ರಣತಂತ್ರ ರೂಪಿಸಿದ್ದಾರೆ.
`ಪೊಲೀಸರು ತನ್ನನ್ನು ಗಡಿಪಾರು ಮಾಡಲು ಉದ್ದೇಶಿಸಿದ್ದು, ಇದಕ್ಕೆ ರಾಮನಗರ ಪಿಎಸ್ಐ ಬಸವರಾಜ ಹಾಗೂ ಪೊಲೀಸ್ ಸಿಬ್ಬಂದಿ ತನೋಜ ಕಾರಣ. ಆ ಇಬ್ಬರನ್ನು ಬೇರೆ ಕಡೆ ಕಳುಹಿಸಬೇಕು. ಹೀಗಾಗಿ ತನಗೆ ಪೊಲೀಸರು ಹೊಡೆದಿದ್ದಾರೆ ಎಂದು ಆಸ್ಪತ್ರೆಗೆ ದಾಖಲಾಗುವೆ. ನೀನು ಪೊಲೀಸರು ಹೊಡೆದಿದನ್ನು ನೋಡಿದೆ ಎಂದು ಸಾಕ್ಷಿ ಹೇಳಬೇಕು’ ಎಂದು ಪ್ರವೀಣ ಹೇಳಿದ್ದಾನೆ. ಇದಕ್ಕೆ ಸೂರಜ್ ಒಪ್ಪಿಲ್ಲ. ಅದಾಗಿಯೂ ಸೂರಜನನ್ನು ಆಸ್ಪತ್ರೆಗೆ ಕರೆದೊಯ್ದ ಪ್ರವೀಣ `ತನಗೆ ಪೊಲೀಸರು ಹೊಡೆದಿದ್ದು, ಚಿಕಿತ್ಸೆ ಕೊಡಿ’ ಎಂದು ಹೇಳಿದ್ದಾನೆ. ಆಗ ಅಲ್ಲಿದ್ದ ಸೂರಜ್ `ಆತ ಬೈಕಿನಿಂದ ಬಿದ್ದು ಗಾಯಗೊಂಡಿದ್ದು’ ಎಂದು ವೈದ್ಯರಿಗೆ ತಿಳಿಸಿದ್ದಾನೆ.
ಇದರಿಂದ ಸಿಟ್ಟಾದ ಪ್ರವೀಣ ತನ್ನ ಸ್ನೇಹಿತ ಸೂರಜನ ಅಪ್ಪ ಮೋಹನ ದೇಸಾಯಿ ಅವರಿಗೆ ಫೋನ್ ಮಾಡಿ `ನಿನ್ನ ಮಗ ಸುಳ್ಳು ಹೇಳದಿದ್ದರೆ ಆತನನ್ನು ಸಾಯಿಸುವೆ’ ಎಂದು ಬೆದರಿಕೆ ಒಡ್ಡಿದ್ದಾನೆ. ಆಗ ಗಲಿಬಿಲಿಗೊಂಡ ಮೋಹನ ದೇಸಾಯಿ ಅವರ ತಮ್ಮ ಅಶೋಕ ದೇಸಾಯಿ, ಮಂಜು ದೇಸಾಯಿ ಜೊತೆ ಆಸ್ಪತ್ರೆಗೆ ಬಂದು ಸೂರಜನನ್ನು ಬಿಡಿಸಿಕೊಂಡು ಹೋಗಿದ್ದಾರೆ.
ಇದಾದ ನಂತರ ಪೊಲೀಸರ ವಿರುದ್ಧ ಸುಳ್ಳು ದೂರು ನೀಡುವಂತೆ ಒತ್ತಾಯಿಸಿದ ಪ್ರವೀಣನ ವಿರುದ್ಧ ಅವರು ಪೊಲೀಸ್ ದೂರು ದಾಖಲಿಸಿದ್ದಾರೆ.