ಹೊಲದಲ್ಲಿ ಕೆಲಸ ಮಾಡುತ್ತಿದ್ದ ಶಿರಸಿಯ ಅಪ್ತಾಪ ಶೇಖ್ ಎಂಬಾತರ ಮೇಲೆ ಮೂವರು ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಬಂದ ಅವರ ಪತ್ನಿಗೂ ಒದೆ ಬಿದ್ದಿದೆ. ಈ ಹೊಡೆದಾಟ ನೋಡಿದ ಅಪ್ತಾಪ ಅವರ ಪುತ್ರ ಮಹಮದ್ ಜುನೈದ್ ಶೇಖ್ ಬನವಾಸಿ ಪೊಲೀಸ್ ಠಾಣೆಯಲ್ಲಿ ಕಾನೂನು ಕ್ರಮಕ್ಕಾಗಿ ದೂರು ನೀಡಿದ್ದಾರೆ.
ಶಿರಸಿ ನ್ಯೂ ಕೆಎಚ್ಬಿ ಕಾಲೋನಿಯ ಅಪ್ತಾಪ ಶೇಖ್ ಅವರು ತಮ್ಮ ಪತ್ನಿ ಜೊತೆ ಹೊಲದಲ್ಲಿ ದುಡಿಯುತ್ತಿದ್ದರು. ಇದನ್ನು ಸಹಿಸದ ದಾಸನಕೊಪ್ಪದ ದಾಸನಕೊಪ್ಪದ ಮಹಮದ್ ಗೌಸ್, ಇರ್ಫಾನ್ ಸಾಬ್ ಹಾಗೂ ಮೈಮೂನಾ ಗೌಸ್ ಅವರ ಮೇಲೆ ಆಕ್ರಮಣ ನಡೆಸಿದರು. ಕೆಟ್ಟದಾಗಿ ನಿಂದಿಸಿ ಕೈ ಮಾಡಿದರು.
ಕತ್ತಿ ಹಾಗೂ ಕಬ್ಬಿಣದ ಪೈಪಿನಿಂದಲೂ ಹೊಡೆದ ಪರಿಣಾಮ ಆ ಇಬ್ಬರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಹೀಗಾಗಿ ಶಿವಮೊಗ್ಗದ ಮೆಟ್ರೋ ಯುನಿಟೆಡ್ ಆಸ್ಪತ್ರೆ ಸೇರಿದರು. ಈ ಬಗ್ಗೆ ಅರಿತ ಕಾಲೇಜು ವಿದ್ಯಾರ್ಥಿ ಮಹಮದ್ ಜುನೈದ್ ಶೇಖ್ ಆಸ್ಪತ್ರಗೆ ಧಾವಿಸಿದರು. ತಮ್ಮ ಪಾಲಕರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಆರೋಪ ಮಾಡಿದರು. ದಾಸನಕೊಪ್ಪದ ಮಹಮದ್ ಗೌಸ್, ಇರ್ಫಾನ್ ಸಾಬ್ ಹಾಗೂ ಮೈಮೂನಾ ಗೌಸ್ ವಿರುದ್ಧ ಕ್ರಮಕ್ಕಾಗಿ ಅವರು ಪೊಲೀಸರ ಬಳಿ ಆಗ್ರಹಿಸಿದರು.
ಇನ್ನೂ ಇದೇ ಹೊಡೆದಾಟದ ವಿಷಯವಾಗಿ ಮೈಮೂನಾ ಸಾಬ್ ಸಹ ಪೊಲೀಸ್ ದೂರು ನೀಡಿದ್ದಾರೆ. `ಬೆಳ್ಳನಕೇರಿ ಗ್ರಾಮದಲ್ಲಿರುವ ನಮ್ಮ ಅತಿಕ್ರಮಣ ಜಾಗಕ್ಕೆ ತೆರಳಿದಾಗ ಅಪ್ತಾಪ್ ಶೇಖ್ ತನಗೆ ನಿಂದಿಸಿ ಹೊಡೆದಿದ್ದಾರೆ. ಜೊತೆಯಲ್ಲಿದ್ದ ಇರ್ಪಾ ಎಂಬಾತರಿಗೂ ಗಾಯವಾಗಿದೆ. ಕತ್ತಿಯಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದಾರೆ’ ಎಂದು ಅವರು ದೂರಿದ್ದಾರೆ. ಎರಡು ಕಡೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.
ಪ್ರೀತಿ-ಪ್ರೇಮ: ಹುಡುಗಿಗಾಗಿ ಹುಡುಗರ ಹೊಡೆದಾಟ!
ಗೋಕರ್ಣದ ಉಮೇಶ ಗೌಡ ಹಾಗೂ ಮಂಜುನಾಥ ಗೌಡ ಒಂದೇ ಹುಡುಗಿಗಾಗಿ ಹೊಡೆದಾಟ ನಡೆಸಿದ್ದಾರೆ. ಈ ಹೊಡೆದಾಟ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ರಾಜಿ ಮಾಡಿ ಕಳುಹಿಸಿದರೂ ಅವರು ಸುಮ್ಮನಾಗಿಲ್ಲ!
ಗೋಕರ್ಣ ಬೇಲೆಹಿತ್ತಲದ ಉಮೇಶ ಗೌಡ ಅವರು ಒಂದು ಹುಡುಗಿಯನ್ನು ಅಗಾಧವಾಗಿ ಪ್ರೀತಿಸುತ್ತಿದ್ದರು. ಆದರೆ, ಆ ಹುಡುಗಿ ಗೋಕರ್ಣದ ಮುಂಜುನಾಥ ಗೌಡ ಅವರ ಬೈಕಿನಲ್ಲಿ ಅಡ್ಡಾಡುತ್ತಿರುವುದನ್ನು ಉಮೇಶ ಗೌಡ ನೋಡಿ ಸಿಟ್ಟಾಗಿದ್ದರು. ಏಪ್ರಿಲ್ 1ರ ಸಂಜೆ 7 ಗಂಟೆ ಆಸುಪಾಸಿಗೆ ಮಂಜುನಾಥ ಗೌಡ ಅವರು ಕಡಲತೀರದಲ್ಲಿ ಸುತ್ತಾಡುತ್ತಿದ್ದರು. ಅಲ್ಲಿಗೆ ಬಂದ ಉಮೇಶ ಗೌಡ ಅವರು `ನಾನು ಪ್ರೀತಿಸಿದ ಹುಡುಗಿಯನ್ನು ನೀ ಏಕೆ ಬೈಕ್ ಮೇಲೆ ಕೂರಿಸಿಕೊಳ್ಳುವೆ’ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತ್ಯುತ್ತರ ನೀಡುವ ಬರದಲ್ಲಿ ಮಂಜುನಾಥ ಗೌಡ ಅವರು ಸಿಟ್ಟಾದರು. ಕೆಟ್ಟ ಶಬ್ದಗಳಿಂದ ಉಮೇಶ ಗೌಡರನ್ನು ಬೈದು `ಅದನ್ನು ಕೇಳಲು ನೀನು ಯಾರು? ನಾನು ಎಲ್ಲಿ ಬೇಕಾದರೂ ಕರೆದುಕೊಂಡು ಹೋಗುತ್ತೇನೆ’ ಎಂದು ಕೂಗಾಡಿದರು. ಅವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಅದು ಹೊಡೆದಾಟದ ಸ್ವರೂಪ ಪಡೆಯಿತು. ಆಗ, ಮಂಜುನಾಥ ಗೌಡ ಅವರು ಉಮೇಶ ಗೌಡ ಅವರ ಎದೆಗೆ ಒದ್ದು ಓಡಿ ಹೋದರು.
ಅದೇ ದಿನ ಉಮೇಶ ಗೌಡ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ಪೊಲೀಸರು ಸಮಾಧಾನ ಮಾಡಿದರೂ ಸಾಕಾಗದೇ ನ್ಯಾಯಾಲಯಕ್ಕೆ ಹೋದ ಉಮೇಶ ಗೌಡ ಪೊಲೀಸರ ಮೇಲೆ ಒತ್ತಡ ತಂದರು. ನ್ಯಾಯಾಲಯದ ಅನುಮತಿ ಪತ್ರ ತಂದು ಮಂಜುನಾಥ ಗೌಡರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗುವಂತೆ ಮಾಡಿದರು.
ಸಾಲ ವಸೂಲಿಗಾರರ ಮೇಲೆ ವಿಷಕಾರಿದ ಸರ್ಫರಾಜ!
ಯಶೋಧರ ಟ್ರಸ್ಟಿನ ಸಹಾಯಕ ಯೋಜನಾಧಿಕಾರಿ ವಿನಾಯಕ ಪಟಗಾರ ಅವರ ಮೇಲೆ ಸರ್ಫರಾಜ ಮದನಸಾಬ್ ಎಂಬಾತರು ಹೊಡೆದಿದ್ದಾರೆ. ವಿನಾಯಕ ಪಟಗಾರ ಅವರು ಮೇಲ್ವಿಚಾರಕರನ್ನು ಜೊತೆಗೆ ಕರೆದೊಯ್ದಿದ್ದರೂ ಸರ್ಫರಾಜ್ ಅವರ ಏಟಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ!
ಕುಮಟಾ ಹಂದಿಗೋಣದ ವಿನಾಯಕ ಪಟಗಾರ್ ಅವರು ಯಶೋಧರ ಟ್ರಸ್ಟಿನ ಸಹಾಯಕ ಯೋಜನಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಶಿರಸಿ ನೆಹರು ನಗರಕ್ಕೆ ಹೋದಾಗ ಅವರು ಏಟು ತಿಂದಿದ್ದು, ಆ ನೋವಿಗೆ ಎರಡು ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದಾದ ನಂತರ ತಮ್ಮ ಬೈಕ್ ಅಡ್ಡಗಟ್ಟಿ ಏಟು ನೀಡಿದ ಸರ್ಫರಾಜ ವಿರುದ್ಧ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಏಪ್ರಿಲ್ 5ರಂದು ವಿನಾಯಕ ಪಟಗಾರ ಅವರು ಶಿರಸಿಯ ನೆಹರು ನಗರಕ್ಕೆ ಹೋಗಿದ್ದರು. ನೆಹರುನಗರ ಸಂಘದ ಹಣಕಾಸು ವ್ಯವಹಾರದ ಬಗ್ಗೆ ಮಾತನಾಡಿದ್ದರು. ಯಶೋಧರ ಟ್ರಸ್ಟಿನ ಸದಸ್ಯೆ ಹಸಿನಾ ಅವರ ಮಗ ಸರ್ಫರಾಜ ಮದನಸಾಬ್ ಸಹ ಅಲ್ಲಿಗೆ ಬಂದಿದ್ದರು. ಆಗ `ನನ್ನ ತಾಯಿ ಹಣ ಕಟ್ಟುವುದಿಲ್ಲ’ ಎಂದು ಸರ್ಫರಾಜ್ ಕೂಗಾಟ ನಡೆಸಿದರು.
ಎಲ್ಲರೂ ಸೇರಿ ಸಮಾಧಾನ ಮಾಡಿದರೂ ಸರ್ಫರಾಜ್ ಕೇಳುವ ಹಾಗಿರಲಿಲ್ಲ. ವಿನಾಯಕ ಪಟಗಾರ್ ಅವರು ಮರಳಿ ಬರುವಾಗ ಸರ್ಫರಾಜ್ ಅವರ ಬೈಕನ್ನು ಅಡ್ಡಗಟ್ಟಿದರು. ಮೇಲ್ವಿಚಾರಕರನ್ನು ನಿಂದಿಸಿದರು. ವಿನಾಯಕ ಪಟಗಾರ್ ಅವರ ಕಿವಿ ಹಾಗೂ ತಲೆಗೆ ಎರಡು ಬಾರಿಸಿದರು. `ಮತ್ತೆ ಇಲ್ಲಿ ಬಂದರೆ ಸಾಯಿಸಿ ಬಿಡುವೆ’ ಎಂದು ಸರ್ಫರಾಜ್ ಎಚ್ಚರಿಸಿದರು.
ಆ ಏಟಿನಿಂದ ತಲೆತಗ್ಗಿಸಿದ ವಿನಾಯಕ ಪಟಗಾರ್ ನೋವು ಸಹಿಸಲಾಗದೇ ಆಸ್ಪತ್ರೆ ಸೇರಿದರು. ಎರಡು ದಿನ ಚೇತರಿಸಿಕೊಂಡ ನಂತರ ಸರ್ಫರಾಜ್ ವಿರುದ್ಧ ಪೊಲೀಸ್ ದೂರು ನೀಡಿದರು.
ಹೊಟೇಲ್ ಮಾಣಿಗೂ ಗಾಂಜಾ ಅಮಲು!
ಕುಮಟಾ ಬಂಡಿಕೇರಿಯ ಶಿವಾನಂದ ಗೌಡ ಗಾಂಜಾ ಸೇವಿಸಿ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ. ವೈದ್ಯರು ಸಹ ಶಿವಾನಂದ ಗೌಡ ಗಾಂಜಾ ಸೇವಿಸಿದನ್ನು ದೃಢಪಡಿಸಿದ್ದಾರೆ.
ಕುಮಟಾದ ಬಂಡಿಕೇರಿ ಶಿವಾನಂದ ಗೌಡ ಅವರು ಹೊಟೇಲ್ವೊಂದರಲ್ಲಿ ಕೆಲಸ ಮಾಡುತ್ತಾರೆ. ಏಪ್ರಿಲ್ 7ರ ಸಂಜೆ ಮನೆಗೆ ಹೋಗುವ ಮುನ್ನ ಅವರು ಗಾಂಜಾ ಸೇದಿದ್ದರು. ಅದೇ ಅಮಲಿನಲ್ಲಿ ಮನೆಗೆ ಹೋಗಲಾದ ಸ್ಥಿತಿಯಲ್ಲಿದ್ದರು. ಬಂಡಿಕೇರಿ ಊರಿಗೆ ಹೋಗುವ ತಿರುವಿನಲ್ಲಿ ಅಲೆದಾಡುತ್ತಿದ್ದ ಅವರು ಪೊಲೀಸರ ಕಣ್ಣಿಗೆ ಬಿದ್ದರು.
ಮಾದಕ ಪದಾರ್ಥ ಸೇವಿಸಿದ ಅನುಮಾನದ ಹಿನ್ನಲೆ ಸಿಪಿಐ ಶ್ರೀಧರ್ ಅವರು ಶಿವಾನಂದ ಗೌಡರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದರು. ತಪಾಸಣೆನಡೆಸಿದ ವೈದ್ಯರು ಗಾಂಜಾ ಸೇವನೆ ದೃಢಪಡಿಸಿದರು. ಈ ಹಿನ್ನಲೆ ಶಿವಾನಂದ ಗೌಡರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು.