ಬನವಾಸಿಯಲ್ಲಿ ನಡೆಯುವ ಪ್ರತಿಷ್ಠಿತ `ಕದಂಬ ಉತ್ಸವ’ಕ್ಕೆ ದಿನಾಂಕ ಘೋಷಣೆಯಾಗಿದೆ. ಕದಂಬ ಉತ್ಸವದ ಜೊತೆ ಈ ಬಾರಿ ಗುಡ್ನಾಪುರ ಉತ್ಸವ ಸಹ ನಡೆಯಲಿದೆ.
ಈ ಬಾರಿ ಎರಡು ದಿನಗಳ ಕಾಲ ಕದಂಬ ಉತ್ಸವ ನಡೆಸಲು ನಿರ್ಧರಿಸಲಾಗಿದೆ. ಕದಂಬ ಉತ್ಸವಕ್ಕೂ ಮುನ್ನ ಎರಡು ದಿನ ಮೊದಲು ಕದಂಬ ಜ್ಯೋತಿಗೆ ಚಾಲನೆ ದೊರೆಯಲಿದೆ. ಕದಂಬ ಉತ್ಸವದ ಭಾಗವಾಗಿ ಗುಡ್ನಾಪುರ ಉತ್ಸವವನ್ನು ಸಹ ಆಯೋಜಿಸಲು ನಿರ್ಧರಿಸಲಾಗಿದೆ. ಏಪ್ರಿಲ್ 10ರಂದು ಗುಡ್ನಾಪುರ ರಾಣಿ ನಿವಾಸದಲ್ಲಿ ಕದಂಬ ಜ್ಯೋತಿಗೆ ಚಾಲನೆ ನೀಡಲಾಗುತ್ತದೆ. ಈ ಜ್ಯೋತಿ ಎರಡು ದಿನಗಳ ಕಾಲ ವಿವಿಧ ಕಡೆ ಸಂಚರಿಸಿ ಬನವಾಸಿಗೆ ಬರಲಿದೆ. ಏಪ್ರಿಲ್ 12ರಂದು ಇದೇ ಜ್ಯೋತಿಯಿಂದ ದೀಪ ಬೆಳಗಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕದಂಬ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಕದಂಬ ಉತ್ಸವದ ವೇದಿಕೆಯಲ್ಲಿ ಸಾಹಿತಿ ಬಿ ಎ ವಿವೇಕ ರೈ ಅವರಿಗೆ ಪಂಪ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಉತ್ಸವದ ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅನೇಕ ಬಗೆಯ ಸ್ಪರ್ಧೆಗಳನ್ನು ಸಹ ನಡೆಸಲು ನಿರ್ಧರಿಸಲಾಗಿದೆ. ಕದಂಬ ಉತ್ಸವದಲ್ಲಿ ರಾಷ್ಟ್ರ, ರಾಜ್ಯ ಮಟ್ಟದ ಕಲಾವಿದರ ಜೊತೆ ಸ್ಥಳೀಯ ಕಲಾವಿದರಿಗೆ ಸಹ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಚರ್ಚೆ ನಡೆದಿದೆ. ಕಳೆದ ಬಾರಿ ಅರ್ಜಿ ಹಾಕಿ ಅವಕಾಶ ದೊರೆಯದ ಕಲಾವಿದರಿಗೆ ಈ ಬಾರಿ ಆದ್ಯತೆ ನೀಡುವ ಬಗ್ಗೆ ಜನಪ್ರತಿನಿಧಿಗಳಿಂದ ಸೂಚನೆ ಬಂದಿದೆ. ಉತ್ಸವದ ಯಶಸ್ಸಿಗಾಗಿ ಕಾರ್ಯಕಾರಿ ಸಮಿತಿ, ಸ್ವಾಗತ ಸಮಿತಿ, ಹಣಕಾಸು ಸಮಿತಿ, ಪ್ರಚಾರ ಸಮಿತಿ, ಸಾಂಸ್ಕೃತಿಕ ಸಮಿತಿ, ವೇದಿಕೆ ಸಮಿತಿ, ವಸತಿ ಸಮಿತಿ, ಸಾರಿಗೆ ಸಮಿತಿ, ಕ್ರೀಡಾ ಸಮಿತಿ, ಆರೋಗ್ಯ ಸಮಿತಿ, ಉಟೋಪಚಾರ, ಭದ್ರತಾ ಸಮಿತಿ ರಚಿಸಲಾಗಿದೆ.
ಶನಿವಾರ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಕದಂಬ ಉತ್ಸವದ ಕುರಿತು ಸಭೆ ನಡೆಸಿದರು. ಈ ವೇಳೆ ಜಿಲ್ಲಾಧಿಕಾರಿ ಕೆ ಲಕ್ಷಿö್ಮÃಪ್ರಿಯಾ ಉತ್ಸವದ ದಿನಾಂಕ ಘೋಷಿಸಿದರು. ಶಿರಸಿ ಶಾಸಕ ಭೀಮಣ್ಣ ನಾಯ್ಕ, ಉಪವಿಭಾಗಾಧಿಕಾರಿ ಕೆವಿ ಕಾವ್ಯರಾಣಿ, ಶಿರಸಿ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಸಹ ಜೊತೆಗಿದ್ದರು.