ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರನ್ನು ನಿಂದಿಸಿದ ಕಾರಣ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ವಿರುದ್ಧ ಶಿರಸಿ ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ ಪೊಲೀಸ್ ಪ್ರಕರಣ ದಾಖಲಿಸಿದ್ದು, ಈ ಪ್ರಕರಣಕ್ಕೆ ಶುಕ್ರವಾರ ಧಾರವಾಡದ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಹೈಟೆಕ್ ಆಸ್ಪತ್ರೆಯ ವೈದ್ಯಕೀಯ ಉಪಕರಣ ಖರೀದಿ ವಿಷಯದಲ್ಲಿನ ಗೊಂದಲದ ಬಗ್ಗೆ ಈಚೆಗೆ ಅನಂತಮೂರ್ತಿ ಹೆಗಡೆ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ `ಶಾಸಕ ಭೀಮಣ್ಣ ನಾಯ್ಕ ಅವರಿಗೆ ಸುಳ್ಳುಗಳ ಸರದಾರ ಪ್ರಶಸ್ತಿ ಕೊಡಬೇಕು’ ಎಂದು ಹೇಳಿದ್ದರು. ಅವರ ಈ ಹೇಳಿಕೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶವ್ಯಕ್ತಪಡಿಸಿ ಪ್ರತಿಭಟಿಸಿದ್ದರು.
ಬಿಜೆಪಿ, ಅನಂತಮೂರ್ತಿ ಹೆಗಡೆ ಅವರ ಬೆಂಬಲಕ್ಕೆ ನಿಂತಿದ್ದು, ಬಿಜೆಪಿ ನಾಯಕರು ಅನಂತಮೂರ್ತಿ ಹೆಗಡೆ ಅವರನ್ನು ಸಮರ್ಥಿಸಿಕೊಂಡಿದ್ದರು. `ನನ್ನ ಹೇಳಿಕೆಯನ್ನು ತಿರುಚಲಾಗಿದೆ’ ಎಂದು ಸ್ವತಃ ಅನಂತಮೂರ್ತಿ ಹೆಗಡೆ ಅವರೇ ಹೇಳಿದ್ದರೂ ಅದನ್ನು ಕಾಂಗ್ರೆಸ್ಸಿಗರು ಒಪ್ಪಿರಲಿಲ್ಲ. ಪೊಲೀಸ್ ಠಾಣೆಗೆ ತೆರಳಿ ಅನಂತಮೂರ್ತಿ ಹೆಗಡೆ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಹಿನ್ನಲೆ ಹೈಟೆಕ್ ಆಸ್ಪತ್ರೆ ಹೋರಾಟದ ವಿಷಯ ರಾಜಕೀಯ ಹೇಳಿಕೆಗಳ ಮೂಲಕ ದಾರಿ ತಪ್ಪುವ ಸಾಧ್ಯತೆ ಹೆಚ್ಚಿತ್ತು.
ತಮ್ಮ ಮೇಲೆ ಪ್ರಕರಣ ದಾಖಲಿಸಿದನ್ನು ಅನಂತಮೂರ್ತಿ ಹೆಗಡೆ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು. ವಕೀಲ ಸೌರಭ ಹೆಗಡೆ ಅನಂತಮೂರ್ತಿ ಹೆಗಡೆ ಅವರ ನಡೆಯನ್ನು ನ್ಯಾಯಾಲಯದ ಮುಂದೆ ಸಮರ್ಥಿಸಿಕೊಂಡರು. ವಾದ ಆಲಿಸಿದ ನ್ಯಾಯಾಧೀಶರು ಇದೀಗ ಈ ಪ್ರಕರಣದ ತನಿಖೆಗೆ ಮಧ್ಯಂತರ ತಡೆ ನೀಡಿದ್ದಾರೆ.
`ಅಧಿಕಾರ ದುರುಪಯೋಗ, ದ್ವೇಷ ರಾಜಕಾರಣದಿಂದ ನ್ಯಾಯ ಗೆಲ್ಲಲು ಸಾಧ್ಯವಿಲ್ಲ’ ಎಂದು ಅನಂತಮೂರ್ತಿ ಹೆಗಡೆ ಪ್ರತಿಕ್ರಿಯಿಸಿದ್ದಾರೆ.