ಮುಂಡಗೋಡ ಪಟ್ಟಣದ ಕಂಬಾರಗಟ್ಟಿ ಹಾಗೂ ಗಾಂಧಿನಗರ ನಿವಾಸಿಗಳಿಗೆ ನಮೂನೆ 3 ಸಿಗದ ಬಗ್ಗೆ ಪಟ್ಟಣ ಪಂಚಾಯತಿ ಕಚೇರಿಯ ಎದುರು ಮಂಗಳವಾರ ಉಗ್ರ ಹೋರಾಟ ನಡೆದಿದೆ.
`ಗಾಂಧಿನಗರ ಹಾಗೂ ಕಂಬಾರಗಟ್ಟಿ ಕೊಳಚೆ ಪ್ರದೇಶದಲ್ಲಿ ಅತಿ ಹೆಚ್ಚು ಕೂಲಿಕಾರರು ವಾಸಿಸುತ್ತಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಜನರಿಗೆ ಪಟ್ಟಣ ಪಂಚಾಯತ ಅನ್ಯಾಯ ಮಾಡಿದೆ’ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
`ಪಟ್ಟಣ ಪಂಚಾಯತಿ ಅಭಿವೃದ್ದಿ ಹಣದೊಂದಿಗೆ ಕೊಳಚೆ ಅಭಿವೃದ್ದಿ ಮಂಡಳಿಯವರು ಅಭಿವೃದ್ಧಿಗೆ ಹಣ ಕೊಡುತ್ತಾರೆ. ಈ ಹಣ ಸದುಪಯೋಗವಾದರೆ ವಸತಿ ನಿರ್ಮಾಣ, ಕುಡಿಯುವ ನೀರು, ರಸ್ತೆ, ಬೆಳಕು, ಸಮುದಾಯ ಭವನ ಮುಂತಾದ ಅಭಿವೃದ್ದಿ ಕಾಮಗಾರಿ ನಡೆಯುತ್ತದೆ. ಈ ಕಾರಣಕ್ಕಾಗಿ ನಮೂನೆ-3ನ್ನು ಕೂಡಲೇ ವಿತರಿಸಬೇಕು’ ಎಂದು ಆಗ್ರಹಿಸಿದರು. ನ್ಯಾಯ ಸಿಗುವವರೆಗೂ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಮುಖಂಡ ರವಿ ಹಾವೇರಿ ತಿಳಿಸಿದರು.
ಚಿದಾನಂದ ಹರಿಜನ ಮಾತನಾಡಿ `ಕಂಬಾರಗಟ್ಟಿ ಫ್ಲಾಟ್ ಸುಮಾರು 30 ವರ್ಷಗಳ ಹಿಂದೆ ಕೊಳಚೆ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಆದರೂ ಈವರೆಗೂ ಅಭಿವೃದ್ಧಿ ಆಗಿಲ್ಲ’ ಎಂದು ದೂರಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪ ಪಂ ಮುಖ್ಯಾಧಿಕಾರಿ ಚಂದ್ರಶೇಖರ ಬಿ ಅವರನ್ನು ಅಶೋಕ ಚಲವಾದಿ ತರಾಟೆಗೆ ತೆಗೆದುಕೊಂಡರು. `ಕಳೆದ ಬಾರಿ ಪ್ರತಿಭಟನೆ ವೇಳೆ ನಮೂನೆ-3 ನೀಡುವುದಾಗಿ ತಾವೇ ಲಿಖಿತವಾಗಿ ನೀಡಿ ಈಗ ಹಲವಾರು ಕಾರಣಗಳನ್ನು ಹೇಳುತ್ತಿದ್ದಿರಿ. ಜಿಲ್ಲಾಧಿಕಾರಿಗಳು 530 ನಿವಾಸಿಗಳಿಗೆ ನಮೂನೆ-3 ನೀಡಲು ಆದೇಶಿವಿದ್ದರೂ ಯಾಕೆ ನೀಡಲು ಮುಂದಾಗುತ್ತಿಲ್ಲ? ಎಂದು ಪ್ರಶ್ನಿಸಿದರು.
ಪ ಪಂ ಅಧ್ಯಕ್ಷೆ ಜಯಸುಧಾ ಭೋವಿ, ಮುಖ್ಯಾಧಿಕಾರಿ ಚಂದ್ರಶೇಖರ ಬಿ ಹಾಗೂ ಸದಸ್ಯರು ನಮೂನೆ-3 ನೀಡುವ ಕುರಿತು ಕೆಲ ಕಾಲ ಚರ್ಚೆ ನಡೆಸಿದರು. ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಏಪ್ರಿಲ್ 30ರ ಒಳಗಾಗಿ ಕಂಬಾರಗಟ್ಟಿ ಹಾಗೂ ಗಾಂಧಿನಗರ ಕೊಳಚೆ ಪ್ರದೇಶದ ನಿವಾಸಿಗಳಿಗೆ ನಮೂನೆ-3 ನೀಡುವುದಾಗಿ ಭರವಸೆ ನೀಡಿದರು.