ಗ್ರಾಮ ಪಂಚಾಯತಗಳಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿ ಉತ್ತರ ಕನ್ನಡ ಜಿಲ್ಲೆಯ ಗ್ರಾ ಪಂ ಪ್ರತಿನಿಧಿಗಳ ಜೊತೆ ಗ್ರಾ ಪಂ ಸಿಬ್ಬಂದಿ ಸೇರಿ ಸಾವಿರಕ್ಕೂ ಅಧಿಕ ಜನ ಬೆಂಗಳೂರಿಗೆ ಹೋಗಿ ಹೋರಾಟ ನಡೆಸಿದ್ದಾರೆ. ಈ ಹೋರಾಟಕ್ಕಾಗಿ ಆದ ವೆಚ್ಚದ ಒಂದು ಪಾಲು ಅನುದಾನದ ಭರವಸೆ ಸಹ ಸರ್ಕಾರದಿಂದ ಸಿಕ್ಕಿಲ್ಲ!
ಸ್ಥಳೀಯ ಗ್ರಾ ಪಂ ಪ್ರತಿನಿಧಿಗಳು ಹಾಗೂ ನೌಕರರನ್ನು ಗ್ರಾಮ ಪಂಚಾಯತ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಎಂ ಕೆ ಭಟ್ಟ ಕರೆದೊಯ್ದರು. ಕೇವಲ ಬಸ್ ಟಿಕೆಟ್’ಗಾಗಿಯೇ ಜನಪ್ರತಿನಿಧಿಗಳು 48 ಸಾವಿರ ರೂ ವೆಚ್ಚ ಮಾಡಿದ್ದು ಊಟ-ವಸತಿ ಎಲ್ಲಾ ವಿಷಯದಲ್ಲಿಯೂ ಹೋರಾಟಗಾರರು ನೀಡಿದ ಹಣದ ಒಂದಷ್ಟು ಪಾಲು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಸಿಕ್ಕಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೆಲಸ ಮಾಡುವ ನೌಕರರು ಈ ಹೋರಾಟದಲ್ಲಿ ಭಾಗಿಯಾಗಿದ್ದು ಅವರ ಬಸ್ ಪ್ರಯಾಣದ ಶುಲ್ಕ ಹಾಗೂ ಇತರೆ ವೆಚ್ಚಗಳಿಂದ ಸರ್ಕಾರಕ್ಕೆ ದೊರೆತ ಲಾಭದ ಲೆಕ್ಕಾಚಾರ ಈ 48 ಸಾವಿರಕ್ಕೆ ಸೇರಿದ್ದಲ್ಲ. ಇನ್ನೂ ಇಡೀ ರಾಜ್ಯದಿಂದ 50 ಸಾವಿರಕ್ಕೂ ಅಧಿಕ ಜನ ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಒಂದು ದಿನದ ಹೋರಾಟದಿಂದ ರಾಜ್ಯ ಸರ್ಕಾರಕ್ಕೆ ಕೋಟಿ ಲೆಕ್ಕಾಚಾರದಲ್ಲಿ ಹಣ ಸಂದಾಯವಾಗಿದ್ದು, ಶನಿವಾರ ಸಹ ಪ್ರತಿಭಟನೆ ಮುಂದುವರೆದಿದೆ. ಶನಿವಾರ ಸಹ ರಾಜ್ಯದ ನಾನಾ ಭಾಗಗಳಿಂದ ಇನ್ನಷ್ಟು ಜನ ಬೆಂಗಳೂರಿಗೆ ತೆರಳುತ್ತಿದ್ದಾರೆ.
ಶುಕ್ರವಾರ ಪ್ರತಿಭಟನೆ ಮುಗಿಸಿದ ಕೆಲವರು ಶನಿವಾರ ಊರಿಗೆ ಮರಳಿದ್ದು, ಧರಣಿ ಮುಂದುವರೆದರೆ ಮತ್ತೆ ಸೋಮವಾರ ತೆರಳಿ ಅದರಲ್ಲಿ ಭಾಗವಹಿಸುವ ಉಮೇದಿಯಲ್ಲಿದ್ದಾರೆ. ಒಟ್ಟು 11 ಒಕ್ಕೂಟದವರು ಸೇರಿ ಈ ಪ್ರತಿಭಟನೆ ಆಯೋಜಿಸಿದ್ದಾರೆ. ವಿ ಪ ಸದಸ್ಯ ಶಾಂತರಾಮ ಸಿದ್ದಿ ಅವರು ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಈ ಹೋರಾಟದಿಂದ ಸರ್ಕಾರದ ಬೊಕ್ಕಸ ತುಂಬುತ್ತಿದ್ದರೂ ಹೋರಾಟಗಾರರ ಬೇಡಿಕೆ ಮಾತ್ರ ಈಡೇರುತ್ತಿಲ್ಲ.
ಕಾಟಾಚಾರದ ಸಭೆ:
ಹೋರಾಟಗಾರರ ಮನವಿ ಸ್ವೀಕರಿಸಿದ ಸರ್ಕಾರದ ಕಾರ್ಯದರ್ಶಿ ಉಮಾ ಮಹಾದೇವನ್ `ಅನುದಾನದ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವೆ. 5 ಪ್ರತಿನಿಧಿಗಳು ಮಾತುಕಥೆಗೆ ಬನ್ನಿ’ ಎಂದು ಕರೆದರು. ಆದರೆ, ಪ್ರತಿಭಟನಾಕಾರರು ಇದಕ್ಕೆ ಒಪ್ಪದೇ ಹೋರಾಟ ಮುಂದುವರೆಸಿದರು. ಮಂತ್ರಿಗಳು ಆಗಮಿಸಿ ಮನವಿ ಸ್ವೀಕಾರ ನಡೆಸುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಅಲ್ಲಿದ್ದವರು ತಿಳಿಸಿದರು.