ಹೊನ್ನಾವರ: ಸಹೋದರರ ನಡುವೆ ಆಗಾಗ ನಡೆಯುತ್ತಿದ್ದ ಜಗಳ-ಹೊಡೆದಾಟ ಕೊಲೆಯಲ್ಲಿ ಅಂತ್ಯವಾಗಿದೆ. ಹೈಬೈಲ್ ಹನುಮಂತ ನಾಯ್ಕರ ಮಕ್ಕಳಾದ ನಾಗೇಶ ನಾಯ್ಕ ಕೊಲೆಯಾಗಿದ್ದು, ಇನ್ನೊಬ್ಬ ಮಗ ಸುಬ್ರಾಯ ನಾಯ್ಕ ಜೈಲು ಸೇರಿದ್ದಾನೆ.
ಗುಂಡಿಬೈಲ್ ಬಳಿಯ ಹೈಬೈಲ್’ ಸುಬ್ರಾಯ ನಾಯ್ಕ ಹಾಗೂ ನಾಗೇಶ ನಾಯ್ಕ ನಡುವೆ ಸದಾ ಜಗಳವಾಗುತ್ತಿದ್ದವು. ಕಳೆದ ಒಂದು ವರ್ಷದಿಂದ ಈ ಸಹೋದರರ ನಡುವೆ ಪದೇ ಪದೇ ವ್ಯಾಜ್ಯ-ಬಿನ್ನಾಭಿಪ್ರಾಯಗಳು ಮೂಡುತ್ತಿದ್ದವು. ಇದೇ ವಿಷಯವಾಗಿ ಐದು ತಿಂಗಳ ಹಿಂದೆಯೂ ಹೊಡೆದಾಟ ನಡೆದಿತ್ತು. ಆಗ ನಾಗೇಶ ನಾಯ್ಕ ಬೀಸಿದ ಕತ್ತಿ ಸುಬ್ರಾಯ ನಾಯ್ಕರ ಕಾಲಿಗೆ ತಾಗಿ ಪೆಟ್ಟಾಗಿತ್ತು. ಇದೇ ಸಿಟ್ಟಿನಲ್ಲಿದ್ದ ಸುಬ್ರಾಯ ನಾಯ್ಕ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ.
ಮಂಗಳವಾರ ರಾತ್ರಿ ಮದ್ಯದ ಅಮಲಿನಲ್ಲಿದ್ದ ಸುಬ್ರಾಯ ನಾಯ್ಕ ಊಟಕ್ಕೆ ಕುಳಿತ ಅಣ್ಣನನ್ನು ಕೆಣಕಿ ಜಗಳ ಶುರು ಮಾಡಿದ್ದಾನೆ. ಜಗಳ ತಾರಕಕ್ಕೆ ಏರಿದಾಗ ತನ್ನ ಒಡನಾಡಿಯಾದ ಸಹೋದರ ನಾಗೇಶ ನಾಯ್ಕರಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ಅದಾದ ನಂತರ ಏನೂ ಆಗಿಲ್ಲ ಎಂಬoತೆ ಶವದ ಮುಂದೆ ಬೀಡಿ ಸೇದುತ್ತ ಕೂತಿದ್ದಾನೆ. ಪೊಲೀಸರು ಬಂದು ಸುಬ್ರಾಯ ನಾಯ್ಕನನ್ನು ವಶಕ್ಕೆ ಪಡೆದಿದ್ದಾರೆ.