ಚಿಕಿತ್ಸೆಗೆ ಬಂದ ರೋಗಿ ಸಂಬoಧಿ ಹಾಗೂ ಆಸ್ಪತ್ರೆ ಸಿಬ್ಬಂದಿ ನಡುವೆ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ರಾತ್ರಿ ಹೊಡೆದಾಟ ನಡೆದಿದೆ. `ಅನಗತ್ಯ ಗೊಂದಲ ಎಬ್ಬಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಆಸ್ಪತ್ರೆ ಸಿಬ್ಬಂದಿ ಗುರುವಾರ ಹೋರಾಟವನ್ನು ನಡೆಸಿದ್ದಾರೆ.
ಬುಧವಾರ ರಾತ್ರಿ ತುರ್ತು ಚಿಕಿತ್ಸಾ ಘಟಕಕ್ಕೆ ರೋಗಿಯೊಬ್ಬರು ಬಂದಿದ್ದರು. ಅವರ ಜೊತೆ ಸಂಬoಧಿಕರು ಇದ್ದರು. ರೋಗಿಯನ್ನು ಸಿಟಿ ಸ್ಕಾನ್ ಸೆಂಟರಿಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ವಾರ್ಡಿಗೆ ಕರೆತರುವ ವೇಳೆ ಸ್ಟೇಚ್ಚರ್ ಮೇಲೆ ಮಲಗಿದ್ದ ರೋಗಿ ಕೊಂಚ ಜಾರಿದ್ದು, ತಕ್ಷಣ ರೋಗಿಗೆ ತೊಂದರೆಯಾಗದoತೆ ಆಸ್ಪತ್ರೆ ಸಿಬ್ಬಂದಿ ಜಾಗೃತಿವಹಿಸಿದ್ದರು. ಆದರೆ, ಇದೇ ವಿಷಯವಾಗಿ ಸಂಬoಧಿಕರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಮುಗಿ ಬಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಅದು ಹೊಡೆದಾಟಕ್ಕೂ ಕಾರಣವಾಯಿತು.
ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಪ್ರವಿಣ ಹಾಗೂ ಪ್ರಶಾಂತರ ಮೇಲೆ ಕೆಲ ಅಪರಿಚಿತರು ಕೈ ಮಾಡಿದರು. ಕರ್ತವ್ಯದಲ್ಲಿದ್ದ ವೈದ್ಯರಿಗೂ ರೋಗಿ ಸಂಬoಧಿಕರು ಕೈ ತೋರಿಸಿದರು. ಹೀಗಾಗಿ ರೋಗಿ ಸಂಬ0ಧಿಕರು ಹಾಗೂ ವೈದ್ಯಕೀಯ ಸಿಬ್ಬಂದಿ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಆಸ್ಪತ್ರೆ ಆವರಣದಲ್ಲಿ ಗೊಂದಲದ ವಾತಾವರಣ ಕಂಡು ಬಂದಿದ್ದು, ಹಿರಿಯ ಅಧಿಕಾರಿಗಳು ಆಗಮಿಸಿ ಆಸ್ಪತ್ರೆ ಸಿಬ್ಬಂದಿಯನ್ನು ಸಮಾಧಾನ ಮಾಡಿದರು.
ಆದರೆ, ರಾತ್ರಿ ನಡೆದ ಘಟನೆಯನ್ನು ಆಸ್ಪತ್ರೆ ಸಿಬ್ಬಂದಿ ಗಂಭೀರವಾಗಿ ಪರಿಗಣಿಸಿದ್ದರು. ಈ ಹಿನ್ನಲೆ ಗುರುವಾರ ಬೆಳಗ್ಗೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರ ಹೂಡಿದರು. `ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಬೇಕು’ ಎಂದು ಪಟ್ಟುಹಿಡಿದರು. `ತಮಗೆ ಸೂಕ್ತ ರಕ್ಷಣೆ ನೀಡಬೇಕು’ ಎಂದು ಒತ್ತಾಯಿಸಿದರು. ಈ ವಿಷಯವಾಗಿ ಆಸ್ಪತ್ರೆಯ ಹಿರಿಯ ಅಧಿಕಾರಿಗಳು ತುರ್ತು ಸಭೆ ನಡೆಸಿದರು.
ರಾತ್ರಿ ನಡೆದ ಗಲಾಟೆಯ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಕಿಮ್ಸ ನಿರ್ದೇಶಕಿ ಡಾ ಪೂರ್ಣಿಮಾ ಭರವಸೆ ನೀಡಿದರು. `ಇತರೆ ರೋಗಿಗಳಿಗೆ ತೊಂದರೆಯಾಗುವುದನ್ನು ತಪ್ಪಿಸಲು ಕೂಡಲೇ ಕೆಲಸಕ್ಕೆ ಹಾಜರಾಗಿ’ ಎಂದು ಮನವಿ ಮಾಡಿದರು. ಈ ಹಿನ್ನಲೆ ಮುಷ್ಕರ ಹಿಂಪಡೆದ ಆಸ್ಪತ್ರೆ ಸಿಬ್ಬಂದಿ ಸೇವೆಗೆ ಸಿದ್ಧರಾದರು.