ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಿ ಮಾರಾಟ ಮಾಡುವ ಅನಂತಮೂರ್ತಿ ಹೆಗಡೆ ಅವರಿಗೆ ಕೃಷಿ ಮೋರ್ಚಾ ಉಪಾಧ್ಯಕ್ಷ ಹುದ್ದೆ ನೀಡಿರುವುದು ಬಿಜೆಪಿಯ ಹುಚ್ಚುಗಾರಿಕೆ. ಕಳೆದ ಲೋಕಸಭಾ ಚುನಾವಣೆ ವೇಳೆ ಹುಟ್ಟಿದ ಹೋರಾಟದ `ಉದ್ಬವ ಮೂರ್ತಿ’ ತಮ್ಮ ಭವಿಷ್ಯದ ರಾಜಕೀಯ ಬುನಾದಿಗಾಗಿ ಇದೀಗ ಪ್ರತ್ಯೇಕ ಜಿಲ್ಲೆ ಹಾಗೂ ಸುಸಜ್ಜಿತ ಆಸ್ಪತ್ರೆಯ ಕೂಗು ಎಬ್ಬಿಸಿದ್ದಾರೆ. ಆದರೆ, ಈ ಎರಡೂ ಹೋರಾಟ ಹುಟ್ಟು ಹಾಕಿದವರು ಅವರಲ್ಲ. ಬಿಜೆಪಿ ರೈತಮೋರ್ಚಾ ನಾಯಕರಾದ ಅವರು ಈವರೆಗೂ ಯಾವುದೇ ರೈತಪರ ಹೋರಾಟವನ್ನು ನಡೆಸಿಲ್ಲ!
ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರು ಸೊಪ್ಪಿನ ಬೆಟ್ಟದ ಹಕ್ಕಿಗಾಗಿ ಬೀದಿಗಿಳಿದಿದ್ದಾರೆ. ಪಹಣಿಯಲ್ಲಿನ `ಅ’ ಖರಾಬ್ ಹಾಗೂ `ಬ’ ಖರಾಬ್ ತಿದ್ದುಪಡಿ ವಿರುದ್ಧ ತೋಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸ್ವತಃ ಬಿಜೆಪಿಯೇ ರೈತರ ಭೂಮಿ ವಕ್ಟ್ ಆಸ್ತಿ ಆದ ಬಗ್ಗೆ ಪ್ರತಿಭಟಿಸುತ್ತಿದೆ. ಅನಂತಮೂರ್ತಿ ಅವರ ಊರಾದ ಬ್ಯಾಗದ್ದೆ ಪರಿಸರದಲ್ಲಿಯೇ ಆನೆ ದಾಳಿಯಿಂದ ರೈತರು ತತ್ತರಿಸಿದ್ದಾರೆ. ವನ್ಯಜೀವಿಗಳ ಹಾವಳಿ, ರೈತರ ಮೇಲೆ ಅಧಿಕಾರಿಗಳ ದಬ್ಬಾಳಿಕೆ, ಅರಣ್ಯ ಅತಿಕ್ರಮಿಣ ರೈತರಿಗೆ ಹಕ್ಕುಪತ್ರ ಸಿಗದಿರುವುದು ಸೇರಿ ಹಲವು ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಆದರೆ, ಈ ಬಗ್ಗೆ ರೈತರು ನಡೆಸುವ ಯಾವ ಹೋರಾಟದಲ್ಲಿಯೂ ಬಿಜೆಪಿಯ ರೈತ ಮೋರ್ಚಾದ ಅನಂತಮೂರ್ತಿ ಹೆಗಡೆ ಆಸಕ್ತಿವಹಿಸಿಲ್ಲ. ಹೋರಾಟಗಾರರನ್ನು ಅವರು ಬೆಂಬಲಿಸಿಯೂ ಇಲ್ಲ!
ಸದಾ ಅಪಾಯದ ಸ್ಥಿತಿಯಲ್ಲಿ ಬದುಕು ನಡೆಸುವ ಕೊನೆ ಗೌಡರಿಗೆ ವಿಮೆ ಮಾಡಿಸುವುದಾಗಿ ಅನಂತಮೂರ್ತಿ ಹೆಗಡೆ ಘೋಷಿಸಿದ್ದರು. ಈ ಯೋಜನೆಗಾಗಿ `ಸೊಸೈಟಿಗಳಲ್ಲಿ ಕೊನೆ ಗೌಡರು ಹೆಸರು ನೊಂದಾಯಿಸಬೇಕು’ ಎಂದು ಅನಂತಮೂರ್ತಿ ಹೆಗಡೆ ಕರೆ ನೀಡಿದ್ದರು. ಆದರೆ, ಯೋಜನೆಯ ಆಳ-ಅಗಲ ತಿಳಿದು ಕೊನೆ ಗೌಡರೇ ಹಿಂದೆ ಸರಿದರು. ಸ್ಥಳೀಯ ಅಂಚೆ ಇಲಾಖೆಯಲ್ಲಿ ಕಡಿಮೆ ಬೆಲೆಯಲ್ಲಿ ಸಿಗುವ ವಿಮೆಗೆ ದಿನವಿಡೀ ವ್ಯಯಿಸಿ ಮುಖ್ಯ ಅಂಚೆ ಕಚೇರಿ ಅಲೆದಾಟ ಬೇಡ ಎಂದು ತೀರ್ಮಾನಿಸಿದರು. `ಸರತಿಯ ಸಾಲಿನಲ್ಲಿ ದಿನವಿಡೀ ನಿಂತು ಆ ದಿನದ ಆಳು ಪಗಾರನ್ನು ಕಳೆದುಕೊಳ್ಳುವ ಬದಲು ಸಾವಿರ ರೂ ಒಳಗಿನ ಮೊತ್ತ ಪಾವತಿಸಿ ನಾವೇ ವಿಮೆ ಮಾಡಿಸಿಕೊಳ್ಳುವುದು ಉತ್ತಮ’ ಎಂದು ಕೊನೆ ಗೌಡರು ಮಾತನಾಡಿಕೊಂಡರು. ದೊಡ್ಡ ಮೂರ್ತಿಯ ಜೊತೆ ಅಮಾಯಕರನ್ನು ಭಿಕ್ಷುಕರಂತೆ ಬಿಂಬಿಸುವ ಷರತ್ತಿನ ಪೋಟೋ ಪ್ರಚಾರ ನೋಡಿ ಅನೇಕ ಸೊಸೈಟಿ ವ್ಯಾಪ್ತಿಯ ಕೊನೆ ಗೌಡರು ಹೆಸರು ಕೊಡಲಿಲ್ಲ. ಅದಾಗಿಯೂ ಈ ವಿಷಯದಲ್ಲಿ ಅನಂತಮೂರ್ತಿ ಪ್ರಚಾರ ಪಡೆದರೇ ವಿನ: ಕೊನೆಗೌಡರ ಅನುಕಂಪ ಪಡೆದಿಲ್ಲ.
ಶಿರಸಿ ಪ್ರತ್ಯೇಕ ಜಿಲ್ಲೆ ಆಗಬೇಕು ಎಂದು ಹೋರಾಟ ನಡೆಸಿದವರು ಬೇರೆ. ಉತ್ತರ ಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆ ಬೇಕು ಎಂದು ಹೋರಾಡಿದವರು ಬೇರೆ. ಆದರೆ, ಕಳೆದ ಒಂದುವರೆ ವರ್ಷಗಳ ಹಿಂದೆ `ನಾಯಕ’ನಾಗಿ ಗುರುತಿಸಿಕೊಂಡ ಅನಂತಮೂರ್ತಿ ಹೆಗಡೆ ಇದೀಗ ಆ ಎರಡು ಹೋರಾಟವನ್ನು ಒಂದು ಮಾಡಿ ಹೊಸ ಹೋರಾಟ ಶುರು ಮಾಡಿದ್ದಾರೆ. ಮೂಲ ಹೋರಾಟಗಾರರನ್ನು ಅವರು ವಿಶ್ವಾಸಕ್ಕೆ ಪಡೆದಿಲ್ಲ. `ಸುಸಜ್ಜಿತ ಆಸ್ಪತ್ರೆಗಾಗಿ ಹೋರಾಟ ನಡೆಸಿದವರು ಪ್ರತ್ಯೇಕ ಜಿಲ್ಲೆಗೆ ನಮ್ಮ ಬೆಂಬಲವಿಲ್ಲ’ ಎನ್ನುತ್ತಿದ್ದಾರೆ. ಈ ಹಿಂದೆ ಶಿರಸಿ ಜಿಲ್ಲೆಗಾಗಿ ಹೋರಾಟ ನಡೆಸಿದವರು ಅನಂತಮೂರ್ತಿ ಹೋರಾಟದಿಂದ ದೂರ ಉಳಿದಿದ್ದಾರೆ.
ಈ ಎರಡೂ ಹೋರಾಟವನ್ನು ಒಂದುಗೂಡಿಸಿ ಹೊಸ ಹೋರಾಟ ನಡೆಸುತ್ತಿರುವ ಅನಂತಮೂರ್ತಿ ಹೆಗಡೆ ಈ ಹಿಂದೆ ನಡೆದ ಹೋರಾಟದ ಅಧ್ಯಯನ ನಡೆಸಿಲ್ಲ. ಅದಕ್ಕೆ ಸಂಬoಧಿಸಿದ ದಾಖಲೆಗಳನ್ನು ಸಹ ಸಂಗ್ರಹಿಸಿಲ್ಲ. ಎಲ್ಲಾ ತಾಲುಕು ಭೇಟಿ ನಡೆಸಿ ಅಲ್ಲಿನ ಜನಸಾಮಾನ್ಯರ ಅಭಿಪ್ರಾಯ ಸಂಗ್ರಹಿಸಿಲ್ಲ. ಹೋರಾಟದ ಸಾಧಕ-ಬಾಧಕಗಳ ಬಗ್ಗೆ ಚಿಂತನಾ ಸಮಾವೇಶಗಳನ್ನು ನಡೆಸಿಲ್ಲ. `ಈವರೆಗೆ ಒಂದು ಲೆಕ್ಕ.. ಇನ್ನು ಮುಂದೆ ಇನ್ನೊಂದು ಲೆಕ್ಕ’ ಎಂಬ ಸಿನಿಮಾ ಸಂಭಾಷಣೆಯನ್ನು ನಕಲು ಮಾಡಿ ಭಾಷಣ ಮಾಡಿದ ಅವರು ಬೇರೆಯವರ ಹೋರಾಟವನ್ನು ಸಹ ನಕಲು ಮಾಡಿದ ಆರೋಪ ಎದುರಿಸುತ್ತಿದ್ದಾರೆ!
ಅಂದ ಹಾಗೇ, ನಾಲ್ಕು ಲಕ್ಷಕ್ಕೂ ಅಧಿಕ ಜನರಿರುವ ಶಿರಸಿಯಲ್ಲಿ ಮೊನ್ನೆ ನಡೆದ ಪ್ರತ್ಯೇಕ ಜಿಲ್ಲೆ ಪ್ರತಿಭಟನೆಯಲ್ಲಿ ಭಾಗವಹಿಸಿದವರು ನೂರೈವತ್ತು ಜನ. ಉತ್ತರ ಕನ್ನಡ ಸಮಗ್ರ ಅಭಿವೃದ್ಧಿಗೆ ದಾಂಡೇಲಿಯಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದವರು ಸಾವಿರಾರು ಜನ!