ಬೆನ್ನು ಮೂಳೆ ಕಾನ್ಸರಿನಿಂದ ಬಳಲುತ್ತಿರುವ ದಿನಕರ ಶೆಟ್ಟಿ ಅವರಿಗೆ ಮುಖ್ಯಮಂತ್ರಿ ಪರಿಹಾರ ಯೋಜನೆ ಅಡಿ ನೆರವು ನೀಡುವಂತೆ ಕುಮಟಾದ ಮಾಜಿ ಶಾಸಕಿ ಶಾರದಾ ಶೆಟ್ಟಿ ಶಿಫಾರಸ್ಸು ಪತ್ರ ನೀಡಿದ್ದಾರೆ. ಈ ಪತ್ರವನ್ನು ಮುಖ್ಯಮಂತ್ರಿ ಕಚೇರಿಗೆ ಜೋಪಾನವಾಗಿ ತಲುಪಿಸಿ, ಯೋಜನೆಯ ಪ್ರಯೋಜನ ಪಡೆಯುವಂತೆ ಅವರು ಸೂಚಿಸಿದ್ದಾರೆ.
ಕುಮಟಾ ಹೆಗಡೆ ಗ್ರಾಮದ ದಿನಕರ ನಾಗೇಶ ಶೆಟ್ಟಿ (52) ರಿಕ್ಷಾ ಓಡಿಸಿ ಬದುಕು ನಡೆಸುತ್ತಿದ್ದರು. ಆದರೆ, ಕಾನ್ಸರ್’ಗೆ ಒಳಗಾದ ನಂತರ ಅವರಿಗೆ ರಿಕ್ಷಾ ಓಡಿಸಲು ಸಾಧ್ಯವಾಗುತ್ತಿಲ್ಲ. 94 ವರ್ಷದ ತಾಯಿ, ಪತ್ನಿ ಹಾಗೂ ಮಗಳನ್ನು ಹೊಂದಿದ ಕುಟುಂಬಕ್ಕೆ ದಿನಕರ ಶೆಟ್ಟಿ ಅವರ ದುಡಿಮೆ ಅನಿವಾರ್ಯವಾಗಿದ್ದು, ಅವರು ದುಡಿದ ಹಣವೆಲ್ಲವೂ ಆಸ್ಪತ್ರೆ ವೆಚ್ಚಕ್ಕೆ ಸರಿಯಾಗುತ್ತಿದೆ.
ಈ ಹಿನ್ನಲೆ ಬುಧವಾರ ದಿನಕರ ಶೆಟ್ಟಿ ಅವರು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಸಮಸ್ಯೆ ಹೇಳಿದರು. ಅಲ್ಲಿದ್ದ ಆಗ್ನೇಲ್ ರೋಡಿಗ್ರಿಸ್ ದಾಖಲೆ ಪರಿಶೀಲನೆ ನಡೆಸಿ ಸಮಸ್ಯೆ ಅರ್ಥ ಮಾಡಿಕೊಂಡರು. ಮಂಗಳೂರಿಗೆ ತೆರಳಿ ಚಿಕಿತ್ಸೆ ಪಡೆಯಲು ಆಗುತ್ತಿರುವ ಅನಾನುಕೂಲತೆ ಹಾಗೂ ಆರ್ಥಿಕ ಸಮಸ್ಯೆ ಬಗ್ಗೆ ಸಂತ್ರಸ್ತರು ವಿವರಿಸಿದರು.
ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಮುಖ್ಯಮಂತ್ರಿ ಪರಿಹಾರ ಯೋಜನೆ ಅಡಿ ಪರಿಹಾರ ಪಡೆಯಲು ಅಗತ್ಯವಿರುವ ದಾಖಲಾತಿ ಸಿದ್ದಪಡಿಸಿದರು. ಅದಾದ ನಂತರ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರ ಬಳಿ ದಿನಕರ ಶೆಟ್ಟಿ ಅವರನ್ನು ಕರೆದೊಯ್ದು ಶಿಫಾರಸ್ಸು ಪತ್ರ ಕೊಡಿಸಿದರು. ದಿನಕರ ಶೆಟ್ಟಿ ಅವರಿಗೆ ನೆರವು ನೀಡುವಂತೆ ಶಾರದಾ ಶೆಟ್ಟಿ ಅವರು ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಮನವಿ ಮಾಡಿದರು.
ಈ ವೇಳೆ ರಿಕ್ಷಾದಿಂದ ಬಿದ್ದು ಕೈ ಮುರಿದುಕೊಂಡಿದ್ದ ದತ್ತಾತ್ರೇಯ ಗೋಪಾಲ ಶಿರಾಲಿ ಅವರಿಗೂ ಮುಖ್ಯಮಂತ್ರಿ ವೈದ್ಯಕಿಯ ಪರಿಹಾರ ನಿಧಿ ನೆರವು ನೀಡುವಂತೆ ಕೋರಿ ಶಾರದಾ ಶೆಟ್ಟಿ ಅವರು ಶಿಫಾರಸ್ಸು ಪತ್ರ ನೀಡಿದರು. ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ, ನಿವೃತ್ತ ಅಧಿಕಾರಿ ನಾಗೇಶ್ ಹುಸ್ವಾರ ಇದ್ದರು.