ಅಂಕೋಲಾ: ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘದಲ್ಲಿ 37 ವರ್ಷಗಳಿಂದ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಎಸ್ ಎನ್ ಹೆಗಡೆ ಹಳವಳ್ಳಿ ಅವರನ್ನು ಸೆ 22ರಂದು ಸಂಘದ ಕಚೇರಿಯಲ್ಲಿ ಆ ಹುದ್ದೆಯಿಂದ ಬೀಳ್ಕೊಡಲಾಗುತ್ತಿದೆ. ಅದಾದ ನಂತರ ಸಂಘದ ವಾರ್ಷಿಕ ಸಭೆ ನಡೆಯಲಿದೆ. ಆದರೆ, ಬೀಳ್ಕೊಡುಗೆ ನಂತರವೂ ಅವರು ವಾರ್ಷಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕಾರಣ ಅದೇ ಸಂಘಕ್ಕೆ ಅವರು ಆರ್ಥಿಕ ಸಲಹೆಗಾರರಾಗಿ ಮುಂದುವರೆಯಲಿದ್ದಾರೆ!
ಎನ್ ಎಸ್ ಹೆಗಡೆ ಹಳವಳ್ಳಿ ಅವರು ರಾಮನಗುಳಿ ಗ್ರೂಪ್ ಸಹಕಾರಿ ಸಂಘದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಅವರ ಸೇವೆ ಸ್ಮರಿಸಿ ಅವರಿಗೆ ಗೌರವ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ಆಡಳಿತ ಮಂಡಳಿ ಅವರ ಸೇವೆ ಮುಂದುವರೆಸುವುದಕ್ಕಾಗಿ ಇನ್ನೊಂದು ಹುದ್ದೆ ನೀಡಿದ್ದು, `ಸಂಘದ ಅಭಿವೃದ್ಧಿಗೆ ಅವರ ಸೇವೆ ಸದಾ ಅಗತ್ಯ’ ಎಂದು ಸಾರಿದ್ದಾರೆ.
ಸಂಘದ ಈ ಕಾರ್ಯಕ್ರಮದಲ್ಲಿ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಶಾಸಕ ಶಿವರಾಮ ಹೆಬ್ಬಾರ್, ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಬೀರಣ್ಣ ನಾಯಕ, ಕೆಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಭಟ್ಟ, ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಇತರರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ವಾರ್ಷಿಕ ಸಭೆ ಶುರುವಾಗಲಿದ್ದು, ಆಧುನಿಕ ಕೃಷಿ ಉಪಕರಣಗಳ ಪ್ರದರ್ಶನ ಹಾಗೂ ಮಾರಾಟ ಸಹ ನಡೆಯಲಿದೆ ಎಂದು ಮುಂದಿನ ಮುಖ್ಯಾಧಿಕಾರಿ ರವೀಂದ್ರ ವೈದ್ಯ ಹೇಳಿದ್ದಾರೆ.