ಒಂದು ಕೆಜಿ ಸಕ್ಕರೆ, ಕಾಲು ಕೆಜಿ ಚಹಾ ಪುಡಿ ನೀಡಿದ ಕೆಲವರು ಎಲ್ಲಡೆ ಕಾರ್ಮಿಕರ ರಕ್ತದ ಮಾದರಿ ಸಂಗ್ರಹಿಸಿದ್ದಾರೆ. ಆದರೆ, ವರ್ಷ ಕಳೆದರೂ ಪಡೆದ ರಕ್ತದ ಮಾದರಿ ಏನಾಯಿತು? ಎಂಬ ಸುದ್ದಿಯಿಲ್ಲ!
ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಂತೆ, ಕಾರ್ಮಿಕರ ಆರೋಗ್ಯ ಕಾಪಾಡುವುದಕ್ಕಾಗಿ ಹಣವನ್ನು ಮೀಸಲಿಟ್ಟಿದೆ. ಆ ಪೈಕಿ ರಾಜ್ಯದ ಎಲ್ಲಡೆ ಕಳೆದ ವರ್ಷ ಕಾರ್ಮಿಕರ ಆರೋಗ್ಯ ಶಿಬಿರವನ್ನು ನಡೆಸಲಾಗಿದೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ ಹಾಗೂ ರಕ್ತದ ಮಾದರಿ ತಪಾಸಣೆ ನಡೆಸಿ ಅನಾರೋಗ್ಯಕ್ಕೆ ಒಳಗಾಗಿರುವ ರೋಗಿಗಳಿಗೆ ಚಿಕಿತ್ಸೆ ನೀಡುವುದು ಸರ್ಕಾರದ ಮುಖ್ಯ ಉದ್ದೇಶ. ಈ ಕೆಲಸವನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಸರ್ಕಾರವಹಿಸಿಕೊಟ್ಟಿದ್ದು, ಆ ಆಸ್ಪತ್ರೆಯವರು ರಕ್ತ ತಪಾಸಣೆ ನಡೆಸಿ ದುಡ್ಡು ಮಾಡಿಕೊಂಡಿದ್ದಾರೆ. ಆದರೆ, ಅದರಿಂದ ಕಾರ್ಮಿಕರಿಗೆ ಕಿಂಚಿತ್ತು ಪ್ರಯೋಜನವಾಗಿಲ್ಲ. ಸರ್ಕಾರ ಮಾಡಿದ ವೆಚ್ಚಕ್ಕೂ ನ್ಯಾಯ ಸಿಕ್ಕಿಲ್ಲ!
ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕಳೆದ ವರ್ಷ ಕಾರ್ಮಿಕರ ರಕ್ತ ತಪಾಸಣಾ ಶಿಬಿರ ನಡೆದಿದೆ. ಬಿಪಿ, ಶುಗರ್ ಹಾಗೂ ಆರೋಗ್ಯ ತಪಾಸಣೆಗೆ ಕಾರ್ಮಿಕರು ಹಾಜರಾಗಿಲ್ಲ. ಹೀಗಾಗಿ ಖಾಸಗಿ ಆಸ್ಪತ್ರೆಯವರು ಮದ್ಯವರ್ತಿಯೊಬ್ಬರನ್ನು ನೇಮಿಸಿ ಸಕ್ಕರೆ-ಚಹಾಪುಡಿ ನೀಡುವ ಆಮೀಷ ಒಡ್ಡಿದೆ. ಶಿಬಿರಕ್ಕೆ ಬಂದ ಜನರ ರಕ್ತದ ಮಾದರಿ ಪಡೆದು ಸಕ್ಕರೆ-ಚಹಾಪುಡಿ ವಿತರಿಸಿದ ಖಾಸಗಿ ಆಸ್ಪತ್ರೆಯವರು ಆ ಮಾದರಿಯ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದಾರೆ. ಫೋಟೋ-ದಾಖಲೆಗಳನ್ನು ನೀಡಿ ಹಣವನ್ನು ಪಡೆದಿದ್ದಾರೆ. ಆದರೆ, ರಕ್ತ ನೀಡಿದ ಕಾರ್ಮಿಕರಿಗೆ ತಮ್ಮ ರಕ್ತದ ಗುಂಪು ಯಾವುದು? ಎಂದು ಸಹ ಗೊತ್ತಾಗಿಲ್ಲ!
ಖಾಸಗಿ ಆಸ್ಪತ್ರೆಯವರು ಕಾರ್ಮಿಕರನ್ನು ಭೇಟಿ ಮಾಡಲು ಪ್ರಯತ್ನಿಸಿದಾಗ ಅನೇಕರು ರಕ್ತ ಮಾದರಿ ನೀಡಲು ಹಿಂದೇಟು ಹಾಕಿದ್ದರು. ಆಗ, `ನಿಮ್ಮ ಕಾರ್ಮಿಕ ಕಾರ್ಡು ರದ್ದು ಮಾಡುತ್ತೇವೆ’ ಎಂದು ಬೆದರಿಸಿಯೂ ಮದ್ಯವರ್ತಿಯೊಬ್ಬರು ಕಾರ್ಮಿಕರನ್ನು ಶಿಬಿರಕ್ಕೆ ಕರೆ ತಂದಿದ್ದರು. ಹೀಗೆ ಬಂದವರಿಗೆ ಸಹ ಸಕ್ಕರೆ-ಚಹಪುಡಿ ನೀಡಿ ರಕ್ತದ ಮಾದರಿ ಪಡೆಯಲಾಗಿದ್ದು, ನಂತರ ರಕ್ತ ಮಾದರಿಯ ವರದಿ ಬಹಿರಂಗವಾಗಿಲ್ಲ. ಹೀಗಾಗಿ ರಕ್ತದ ಮಾದರಿಯನ್ನು ಖಾಸಗಿ ಆಸ್ಪತ್ರೆಯವರು ದುರುಪಯೋಗಪಡಿಸಿಕೊಂಡ ಅನುಮಾನಗಳು ಕಾರ್ಮಿಕರನ್ನು ಕಾಡುತ್ತಿದೆ.
ಕಾರ್ಮಿಕರಿಗೆ ಇರುವ ರೋಗಗಳ ಬಗ್ಗೆ ಪತ್ತೆ ಹಚ್ಚಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡುವುದಕ್ಕಾಗಿ ಸರ್ಕಾರ ಈ ಯೋಜನೆ ಜಾರಿಗೆ ತಂದಿದ್ದು, ಖಾಸಗಿಯವರ ಲಾಭಿಯಿಂದ ಇಡೀ ಯೋಜನೆ ಹಳ್ಳ ಹಿಡಿದಿದೆ. ತಪಾಸಣೆ ನಡೆಸಿದ ಅಧಿಕಾರಿಗಳು ಒಂದು ವರ್ಷ ಕಳೆದರೂ ರಕ್ತ ಮಾದರಿಯ ವರದಿ ನೀಡದ ಕಾರಣ ಕಾರ್ಮಿಕರಲ್ಲಿಯೂ ಅನುಮಾನ ಹೆಚ್ಚಾಗಿದೆ.
ಆ ವೇಳೆ ರಕ್ತ ಮಾದರಿ ನೀಡಿದವರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ರಸೀದಿ ಹೊಂದಿದ್ದಾರೆ. ಅದರ ಆಧಾರದಲ್ಲಿಯೇ ಇದೀಗ ಯೋಜನೆಯ ಆಗು-ಹೋಗುಗಳ ಬಗ್ಗೆ ಪ್ರಶ್ನಿಸುತ್ತಿದ್ದಾರೆ.
ಸಕ್ಕರೆ-ಚಾಪುಡಿ ನೀಡಿ ರಕ್ತ ಪಡೆದವರು ಏನಾದರು? ಈ ಬಗ್ಗೆ ಜೊಯಿಡಾ ರಾಮನಗರದ ಕಾರ್ಮಿಕರು ಮಾತನಾಡಿದ ವಿಡಿಯೋ ಇಲ್ಲಿ ನೋಡಿ..