ಭಟ್ಕಳ: ವರ್ಷವಿಡೀ ಸಮುದ್ರದಲ್ಲಿ ಸರ್ಕಸ್ ಮಾಡುತ್ತ ಮತ್ಸ್ಯ ಶಿಖಾರಿ ನಡೆಸುವವರು ಮೀನುಗಾರರು. ಮೀನುಗಾರಿಕಾ ದಿನಾಚರಣೆ ನೆಪದಲ್ಲಿ ರೆಸಾರ್ಟಿನಲ್ಲಿ ಮೋಜು ಮಸ್ತಿಯಲ್ಲಿ ತೊಡಗುವವರು ಜನಪ್ರತಿನಿಧಿಗಳು!
ಮುರುಡೇಶ್ವರದಲ್ಲಿ 5 ಕೋಟಿ ರೂ ವೆಚ್ಚದಲ್ಲಿ ಮೀನುಗಾರಿಕಾ ದಿನಾಚರಣೆ ನಡೆಯುತ್ತಿದೆ. ಅರ್ಜುನ್ಯ ಜನ್ಯ ಸೇರಿ ಹಲವು ಖ್ಯಾತ ನಾಮರು ಸಹ ಇದೇ ದುಡ್ಡಿನಲ್ಲಿ ಬಂದು ಕುಣಿದಿದ್ದಾರೆ. ಸಚಿವ ಮಂಕಾಳು ವೈದ್ಯರ ಜೊತೆ ಶಾಸಕ ಸತೀಶ್ ಸೈಲ್, ಭೀಮಣ್ಣ ನಾಯ್ಕ ಸಹ ಕುಣಿದು ಕುಪ್ಪಳಿಸಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಸಹ ಇಲ್ಲಿಗೆ ಬಂದು ದೋಣಿ ವಿಹಾರ ನಡೆಸಿದ್ದಾರೆ. ಆದರೆ, ಮೀನುಗಾರರ ದಿನಾಚರಣೆ ಅಂಗವಾಗಿ ಮೀನುಗಾರರ ಬದುಕು ಅಧ್ಯಯನ ನಡೆದಿಲ್ಲ. ಅವರ ಸಮಸ್ಯೆಗಳನ್ನು ಆಲಿಸುವ ಪ್ರಯತ್ನ ಆಗಿಲ್ಲ. ಕೆಲ ಮೀನುಗಾರರಿಗೆ ಸಲಕರಣೆ ವಿತರಿಸಿದ್ದು ಹೊರತುಪಡಿಸಿ ಮೂರು ದಿನದ ಮೀನುಗಾರಿಕಾ ದಿನಾಚರಣೆಯಿಂದ ನೈಜ ಮೀನುಗಾರರಿಗೆ ಯಾವ ಪ್ರಯೋಜನವೂ ಇಲ್ಲ!
ಅಲಂಕಾರಿಕ ಮೀನುಗಳ ಗ್ಯಾಲರಿ, ಟನಲ್ ಅಕ್ವೇರಿಯಂ, ಸ್ಥಳೀಯ ಹಾಗೂ ಹೊರದೇಶದ ಮೀನುಗಳು, ಸಮುದ್ರ ಚಿಪ್ಪು ಪ್ರದರ್ಶನ, ಮೀನು ಖಾದ್ಯದ ಆಹಾರ ಮಳಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಈ ದಿನಾಚರಣೆಯ ಪ್ರಮುಖ ಅಂಶಗಳು. ಮೀನುಗಾರಿಕಾ ದಿನಾಚರಣೆ ಅಂಗವಾಗಿ ವಿವಿಧ ಮೀನುಗಳ ಪ್ರದರ್ಶನ, ಮೀನು ಊಟ ಜೊತೆಗೆ ಸಂಜೆ ಮನರಂಜನೆ ಕಾರ್ಯಕ್ರಮವನ್ನು ಸರ್ಕಾರಿ ಹಣದಲ್ಲಿ ಆಯೋಜಿಸಲಾಗಿದೆ. ದಿನವೂ ಮೀನುಗಳ ಜೊತೆಯೇ ಒಡನಾಟವಿರುವ ಮೀನುಗಾರರಿಗೆ ಅಲ್ಲಿನ ಮತ್ಸö್ಯಮೇಳ, ಮತ್ಸö್ಯ ಖಾದ್ಯಗಳು ಹೊಸತಾಗಿರಲಿಲ್ಲ. ಮೀನುಗಾರರ ಬದುಕು ಸುಧಾರಿಸುವ ಯಾವ ಯೋಜನೆಯೂ ಈ ಮೇಳದಲ್ಲಿ ಕಾಣಿಸಲಿಲ್ಲ.
`ಮೀನುಗಾರಿಕಾ ದಿನಾಚರಣೆ ಅಂಗವಾಗಿ ಮೀನುಗಾರರಿಗೆ ತರಬೇತಿ ಆಯೋಜಿಸಬಹುದಾಗಿತ್ತು. ತಂತ್ರಜ್ಞಾನ ಅಳವಡಿಕೆ, ಸಬ್ಸಿಡಿ ಯೋಜನೆಗಳನ್ನು ಪರಿಚಯಿಸಬಹುದಾಗಿತ್ತು. ಅಪಾಯದ ಮುನ್ಸೂಚನೆ ಅರೆಯುವ ವಿಧಾನ, ತುರ್ತು ಸನ್ನಿವೇಶದಲ್ಲಿ ಜೀವ ಉಳಿಸಿಕೊಳ್ಳುವ ತಂತ್ರಗಳ ಬಗ್ಗೆಯೂ ಶಿಬಿರ ಆಯೋಜಿಸಬಹುದಿತ್ತು’ ಎಂದು ಮೀನುಗಾರರೊಬ್ಬರು ಹೇಳಿದರು.
ಇನ್ನೂ ನ 21ರ ಮಧ್ಯಾಹ್ನ 3 ಗಂಟೆಗೆ ಮೀನುಗಾರಿಕಾ ದಿನಾಚರಣೆ ಕಾರ್ಯಕ್ರಮ ನಡೆಯಬೇಕಿತ್ತು. ಅಧಿಕಾರಿಗಳ ಸೂಚನೆ ಮೇರೆಗೆ ಅನೇಕ ಶಾಲೆಯವರು ತಮ್ಮ ಮಕ್ಕಳನ್ನು ಈ ಕಾರ್ಯಕ್ರಮಕ್ಕೆ ಕಳುಹಿಸಿದ್ದರು. ಆದರೆ, ಕಾರ್ಯಕ್ರಮ ಶುರುವಾಗಿದ್ದು ಸೂರ್ಯ ಮುಳುಗಿದ ನಂತರವೇ. ಇದರಿಂದ ಮಕ್ಕಳು ಪರಿತಪಿಸಿದರು. ಒಟ್ಟಾರೆಯಾಗಿ ಮೀನು ಕೃಷಿ ತಂತ್ರಜ್ಞಾನ ಮಾಹಿತಿ ಹಾಗೂ ಪೃಕೃತಿ ವಿಕೋಪದಿಂದ ಸಾವನಪ್ಪಿದ ಮೀನುಗಾರರಿಗೆ 10 ಲಕ್ಷ ರೂ ಪರಿಹಾರ ಘೋಷಣೆಗೆ ಸಿಕ್ಕಿದ್ದು ಮಾತ್ರ ಅನುಕೂಲಕರ. ಅದನ್ನು ಹೊರತುಪಡಿಸಿದರೆ ಮೀನು ಮೇಳದ ಹೆಸರಿನಲ್ಲಿ 5 ಕೋಟಿ ವೆಚ್ಚ ಮಾಡಿದ್ದು ವ್ಯರ್ಥ!