ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸಹ ಅರಣ್ಯ ಅತಿಕ್ರಮಣ ನಡೆಸಿದ್ದಾರೆ. ತಮ್ಮ ಒಡೆತನದ ಶಿಕ್ಷಣ ಸಂಸ್ಥೆ ಪಕ್ಕದ 1 ಎಕರೆಯಷ್ಟು ಅರಣ್ಯವನ್ನು ಸಚಿವರು ಒತ್ತುವರಿ ಮಾಡಿದ್ದು, ಅರಣ್ಯ ಇಲಾಖೆಯವರು ಬೇರೆಯವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಭಟ್ಕಳದ ಮಾವಳ್ಳಿ ಬಳಿಯ ಬೈಲೂರಿನಲ್ಲಿ ಸಚಿವ ಮಂಕಾಳು ವೈದ್ಯ ಅವರು ತಮ್ಮ ಪುತ್ರಿ ಬೀನಾ ವೈದ್ಯ ಅವರ ಹೆಸರಿನಡಿ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ. `ಬೀನಾ ವೈದ್ಯ ಇಂಟರ್ನ್ಯಾಶನಲ್ ಪಬ್ಲಿಕ್ ಸ್ಕೂಲ್’ ಪಕ್ಕದ ಅರಣ್ಯ ಪ್ರದೇಶ 2024ರ ಮೇ 18ರಂದು ಒತ್ತುವರಿಯಾಗಿದೆ. ಭಟ್ಕಳದ ಶಂಕರ್ ನಾಯ್ಕ, ನಾಗೇಂದ್ರ ನಾಯ್ಕ ಹಾಗೂ ನಾಗೇಶ್ ನಾಯ್ಕ ಎಂಬಾತರು ಇದನ್ನು ಪತ್ತೆ ಮಾಡಿದ್ದು, ರಾಜ್ಯಪಾಲರನ್ನು ಒಳಗೊಂಡು ವಿವಿಧ ಕಡೆ ದೂರು ಸಲ್ಲಿಸಿದ್ದಾರೆ.
`ಭಟ್ಕಳ ತಾಲೂಕಿನ ಬೈಲೂರಿನ ಸರ್ಕಾರಿ ಅರಣ್ಯ ಜಾಗದ ಸರ್ವೆ ನಂ 600ರಲ್ಲಿ ಅಕ್ರಮವಾಗಿ ಮಣ್ಣು ತೆಗೆಯಲಾಗಿದೆ. ಒಂದು ಎಕರೆ ಜಾಗವನ್ನು ಶಿಕ್ಷಣ ಸಂಸ್ಥೆ ಬಳಕೆಗಾಗಿ ಸಚಿವರೇ ಒತ್ತುವರಿ ಮಾಡಿದ್ದಾರೆ. ಬಡವರ ಅರಣ್ಯ ಅತಿಕ್ರಮಣ ವಿಷಯವನ್ನು ಗಂಭೀರವಾಗಿ ಪರಿಗಣಿಸುವ ಅರಣ್ಯ ಸಚಿವ ಈಶ್ವರ ಖಂಡ್ರೇ, ಮೀನುಗಾರಿಕಾ ಸಚಿವರ ಅರಣ್ಯ ಒತ್ತುವರಿ ಅರಿವಿದ್ದರೂ ಮೌನವಾಗಿದ್ದಾರೆ’ ಎಂಬುದು ದೂರುದಾರರ ಆರೋಪ.
`ಸಚಿವರು ಅರಣ್ಯ ಭೂಮಿ ಒತ್ತುವರಿ ಮಾಡಿದರೂ ಅರಣ್ಯಾಧಿಕಾರಿಗಳು ಈ ಪ್ರಕರಣದಲ್ಲಿ ಬೇರೆಯವರನ್ನು ಸಿಲುಕಿಸಿದ್ದಾರೆ. ಸಚಿವರು ತಮ್ಮ ಪ್ರಭಾವ ಬೀರಿ ಪ್ರಕರಣದಲ್ಲಿ ಶಾಲೆ ಹಾಗೂ ತಮ್ಮ ಹೆಸರು ಬಾರದಂತೆ ನೋಡಿಕೊಂಡಿದ್ದಾರೆ. ಎಸಿಎಫ್ ಗಿರೀಶ್ ಪಿ ಸಹ ಸುಳ್ಳು ದಾಖಲೆ ಸೃಷ್ಠಿಸಿದ್ದಾರೆ’ ಎಂದು ದೂರಲಾಗಿದೆ.