ಬೆಂಗಳೂರು: ಹೃದಯಸ್ಪರ್ಶಿ ಧಾರಾವಾಹಿಗಳ ಮೂಲಕ ಕನ್ನಡದ ಪ್ರೇಕ್ಷಕರ ಮನಸೂರೆಗೊಂಡಿರುವ ಕಲರ್ಸ್ ಕನ್ನಡ ವಾಹಿನಿಯು ಮತ್ತೊಂದು ಹೊಸ ದೈನಿಕ ಧಾರಾವಾಹಿ ನೂರು ಜನ್ಮಕೂ ಇದೇ 23ರಿಂದ ಪ್ರತಿ ರಾತ್ರಿ 8. 30 ಕ್ಕೆ ಪ್ರಸಾರಗೊಳ್ಳಲಿದೆ. ಹೊಸ ಧಾರಾವಾಹಿಯು ವಿಭಿನ್ನ ರೋಚಕ ಕತೆ ಹೊಂದಿದೆ.
ಮೊದಲ ನೋಟಕ್ಕೆ ‘ನೂರು ಜನ್ಮಕೂ’ ಒಂದು ಉತ್ಕಟ ಪ್ರೇಮಕತೆ. ಪ್ರತಿಷ್ಠಿತ ಕದಂಬ ವಂಶದ ಉತ್ತರಾಧಿಕಾರಿ ಚಿರಂಜೀವಿ ಹಾಗೂ ಮೈತ್ರಿ ಎಂಬ ಸಾಧಾರಣ ಕುಟುಂಬದ ಹುಡುಗಿಯ ನಡುವಿನ ಪ್ರೇಮದ ಕಥೆ ಇದು. ಚಿರಂಜೀವಿ ಅತಿಮಾನುಷ ಶಕ್ತಿಗಳ ಹಿಡಿತಕ್ಕೆ ಸಿಕ್ಕು ನಲುಗುವಾಗ ರಾಘವೇಂದ್ರ ಸ್ವಾಮಿಯ ಪರಮಭಕ್ತೆ ಮೈತ್ರಿ ತನ್ನ ಶ್ರದ್ಧೆ ಹಾಗೂ ನಂಬಿಕೆಗಳ ಮುಖಾಂತರ ಅವನನ್ನು ರಕ್ಷಿಸಲು ಪಣತೊಡುತ್ತಾಳೆ. ಚಿರಂಜೀವಿಯ ಜೀವ ಕಾಪಾಡುತ್ತಲೇ ತಮ್ಮ ಪ್ರೀತಿಯನ್ನೂ ಉಳಿಸಿಕೊಳ್ಳಲು ಒದ್ದಾಡುವ ಹೆಣ್ಣಾಗಿ ಮೈತ್ರಿ ನೋಡುಗರ ಮನಸ್ಸನ್ನು ಆವರಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ.
ಧಾರಾವಾಹಿಯ ಕತೆಯನ್ನು ಚಿಕ್ಕಮಗಳೂರಿನ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ. ‘ನೂರು ಜನ್ಮಕೂ’ ಮಾನವೀಯ ಅಂತಃಕರಣ ಹಾಗೂ ಅತಿಮಾನುಷ ಶಕ್ತಿಗಳ ಅಟ್ಟಹಾಸವನ್ನು ಮುಖಾಮುಖಿ ಆಗಿಸುತ್ತದೆ. ಹಾಗಾಗಿ ರೋಚಕ ತಿರುವುಗಳನ್ನು ಪಡೆಯುತ್ತಾ ವೀಕ್ಷಕರನ್ನು ರಂಜಿಸುತ್ತದೆ. ಸಂಬಂಧಗಳು, ಕುಟುಂಬ ನಾಟಕಗಳು ಅದನ್ನು ಮತ್ತಷ್ಟು ರಸವತ್ತಾಗಿಸುತ್ತವೆ. ಉನ್ನತ ಮಟ್ಟದ ಗ್ರಾಫಿಕ್ಸ್ ಹೊಂದಿರುವ ಈ ಧಾರವಾಹಿ ಕನ್ನಡ ಪ್ರೇಕ್ಷಕರ ಮನಸೂರೆಗೊಳಿಸುತ್ತದೆ.
ಕನ್ನಡ ಧಾರಾವಾಹಿಗಳಲ್ಲಿ ಅತಿಮಾನುಷ ಶಕ್ತಿಯ ಕತೆಗಳು ಕಡಿಮೆ. ಆ ಕೊರತೆಯನ್ನು ನೂರು ಜನ್ಮಕೂ ಸಮರ್ಥವಾಗಿ ತುಂಬಲಿದೆ.
ಶ್ರವಂತ್ ರಾಧಿಕಾ ನಿರ್ದೇಶನದ ಈ ಧಾರಾವಾಹಿಯಲ್ಲಿ ಹೆಸರಾಂತ ನಟನಟಿಯರ ದಂಡೇ ಇದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಗೀತಾ’ ಧಾರಾವಾಹಿಯಲ್ಲಿ ನಾಯಕ ವಿಜಯ್ ಆಗಿ ನಟಿಸಿದ್ದ ಧನುಷ್ ಗೌಡ ಇದೀಗ ‘ನೂರು ಜನ್ಮಕೂ’ ಧಾರಾವಾಹಿಯಲ್ಲಿ ಚಿರಂಜೀವಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚಿರು, ಜಾಲಿ ಆಗಿರೋ ಮನುಷ್ಯ. ಜೀವನದಲ್ಲಿ ಏನೇ ಕಷ್ಟ ಬಂದರೂ ಸ್ಪೋರ್ಟಿವ್ ಆಗಿ ತಗೋತಾನೆ. ಫ್ಯಾಮಿಲಿ ಮ್ಯಾನ್, ಶತ್ರುಗಳನ್ನೂ ಪ್ರೀತಿಸ್ತಾನೆ. ದೆವ್ವ-ದೇವರ ಮೇಲೆ ನಂಬಿಕೆ ಇಲ್ಲ.
ಮಿಸ್ ಮಂಗಳೂರು ಕಿರೀಟ ಮುಡಿಗೇರಿಸಿಕೊಂಡಿದ್ದ ಶಿಲ್ಪಾ ಕಾಮತ್ ನಾಯಕಿ ಆಗಿ ಮೈತ್ರಿ ಪಾತ್ರದಲ್ಲಿ ರಂಜಿಸಲಿದ್ದಾರೆ. ಕಥಾ ನಾಯಕಿ ಮೈತ್ರಿ, ರಾಘವೇಂದ್ರ ಸ್ವಾಮಿ ಭಕ್ತೆ. ಆಶಾವಾದಿ, ಸ್ವಾಭಿಮಾನಿ ಹಾಗೂ ತ್ಯಾಗಮಯಿ.
ದೆವ್ವದ ಪಾತ್ರದಲ್ಲಿ ಚಂದನ ಗೌಡ ನಟಿಸುತ್ತಿದ್ದಾರೆ.
ಈ ಪಾತ್ರದ ಹೆಸರು ಕಾಮಿನಿ. ಇವಳಿಗೆ ಚಿರು ಎಂದರೆ ಪ್ರಾಣ. ಶಾರ್ಟ್ ಟೆಂಪರ್, ಹಠ ಮಾರಿ ಹಾಗೂ ಧೈರ್ಯವಂತೆ.
ಹಿರಿಯ ನಟಿ ಗಿರಿಜಾ ಲೋಕೇಶ್, ಭಾಗ್ಯಶ್ರೀ, ಬಿ ಎಂ ವೆಂಕಟೇಶ್ ಮತ್ತು ಗಾಯಕಿ ಅರ್ಚನಾ ಉಡುಪ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜತೆಗೆ ಮಜಾ ಟಾಕೀಸ್ ಖ್ಯಾತಿಯ ರೆಮೋ ಕೂಡ ಬಣ್ಣ ಹಚ್ಚಿದ್ದಾರೆ. ಚಿತ್ರಾ ಶೆಣೈ ತಮ್ಮ ಗುಡ್ ಕಂಪನಿ ಸಂಸ್ಥೆಯಿಂದ ನೂರು ಜನ್ಮಕೂ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ.
ಕಲರ್ಸ್ ಕನ್ನಡ ಕೌಟುಂಬಿಕ ಮನರಂಜನೆ ಚಾನಲ್ ಆಗಿದ್ದು, ಕನ್ನಡದ ಶ್ರೀಮಂತ ಸಂಸ್ಕೃತಿ ಪ್ರತಿಬಿಂಬಿಸುವ ಗುಣಮಟ್ಟದ ಕಾರ್ಯಕ್ರಮಗಳನ್ನು ವೀಕ್ಷಕರಿಗೆ ಒದಗಿಸುತ್ತದೆ. ಭಾಗ್ಯಲಕ್ಷ್ಮಿ, ಲಕ್ಷ್ಮೀ ಬಾರಮ್ಮ, ರಾಮಚಾರಿ, ನಿನಗಾಗಿ, ದೃಷ್ಟಿಬೊಟ್ಟು, ಕರಿಮಣಿ, ಶ್ರೀಗೌರಿ, ಗಿಚ್ಚಿ-ಗಿಲಿಗಿಲಿ, ರಾಜಾ-ರಾಣಿ, ನನ್ನಮ್ಮ ಸೂಪರ್ಸ್ಟಾರ್, ಫ್ಯಾಮಿಲಿ ಗ್ಯಾಂಗ್ ಸ್ಟಾರ್ಸ್ ಮತ್ತು ಬಿಗ್ ಬಾಸ್ ಕನ್ನಡ ಚಾನಲ್ನ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳು.