ಯಲ್ಲಾಪುರ: ಭಗವದ್ಗೀತೆ ಅಧ್ಯಯನಕ್ಕಾಗಿ ವಿದೇಶದಿಂದ ಆಗಮಿಸಿದ ನಾಲ್ವರು ಬುಧವಾರ ಯಲ್ಲಾಪುರ ಪಟ್ಟಣದಲ್ಲಿ ತ್ಯಾಜ್ಯ ಆರಿಸಿದರು. ಇಲ್ಲಿನ ಬೀದಿಗಳನ್ನು ಗುಡಿಸಿ ಸ್ವಚ್ಛತೆಯ ಸಂದೇಶ ಸಾರಿದರು.
ಆಮೇರಿಕಾದ ಯಮಲಗುಚಿ, ಜಪಾನಿನ ಅಕಿಕೋ, ಇಟಲಿಯ ಎರಿಕಾ ಹಾಗೂ ಪೋಲ್ಯಾಂಡನ ಮ್ಯಾಕ್ಸ್ ಎಂಬಾತರು ಭಗವದ್ಗೀತೆ ಅಧ್ಯಯನಕ್ಕಾಗಿ ಭಾರತಕ್ಕೆ ಬಂದಿದ್ದಾರೆ. ಗೀತೆಯ ಮುಖ್ಯ ಅಂಶಗಳಲ್ಲಿ ಒಂದಾದ ಕರ್ಮ ಯೋಗದ ಬಗ್ಗೆ ಅರಿತ ಅವರು ಸ್ವಚ್ಛತಾ ಕಾರ್ಯದ ಮೂಲಕ ಸೇವಾ ಚಟುವಟಿಕೆ ನಡೆಸಿದ್ದಾರೆ.
ಬುಧವಾರ ಪೌರ ಕಾರ್ಮಿಕರ ಜೊತೆ ಬೆರೆತ ವಿದೇಶಿಗರು ಅವರೊಡನೆ ವಿವಿಧ ಪ್ರದೇಶಗಳಿಗೆ ತೆರಳಿ ಕರ್ಮಯೋಗದ ಆಚರಣೆ ನಡೆಸಿದರು. ಆ ಮೂಲಕ ಅರ್ಥಪೂರ್ಣ ಗೀತಾ ಜಯಂತಿ ಆಚರಣೆಯ ಭಾವ ವ್ಯಕ್ತಪಡಿಸಿದರು. ವಿಘ್ನೇಶ್ವರ ಭಟ್ಟ ಎಂಬಾತರ ಋಷಿಕುಲಂ ಸಂಸ್ಥೆಯಲ್ಲಿ ಈ ವಿದೇಶಿಗರು ಅಧ್ಯಯನ ನಡೆಸುತ್ತಿದ್ದಾರೆ.