ಹುಲಿ ಗಣತಿ ಕಾರ್ಯಕ್ಕಾಗಿ ಕಾಡಿನಲ್ಲಿ ಅಳವಡಿಸಿದ್ದ ಕ್ಯಾಮರಾವನ್ನು ಕಳ್ಳರು ದೋಚಿದ್ದಾರೆ. ಕಳೆದುಹೋದ ಕ್ಯಾಮರಾಗಾಗಿ ಕಾಡು ಪೂರ್ತಿ ಸುತ್ತಾಡಿದ ಅರಣ್ಯ ಸಿಬ್ಬಂದಿ ಕೊನೆಗೆ ಕಳ್ಳರ ಪತ್ತೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ.
ಜೊಯಿಡಾ ತಾಲೂಕಿನ ಕ್ಯಾಸಲರಾಕ್ ವನ್ಯಜೀವಿ ವಲಯದ ಆನಮೋಡು ಅರಣ್ಯದಲ್ಲಿ ಫೆ 24ರಂದು ಎರಡು ಕ್ಯಾಮರಾ ಅಳವಡಿಸಲಾಗಿತ್ತು. ಆ ಕ್ಯಾಮರಾದೊಳಗೆ 16 ಜಿಬಿಯ ಮೆಮೋರಿ ಕಾರ್ಡನ್ನು ಅಳವಡಿಸಲಾಗಿತ್ತು. ಪ್ರಾಣಿಗಳ ಚಲನ-ವಲನಗಳನ್ನು ಈ ಕ್ಯಾಮರಾ ಸೆರೆ ಹಿಡಿಯುತ್ತಿತ್ತು. ಅದರ ಆಧಾರದಲ್ಲಿ ಅರಣ್ಯ ಇಲಾಖೆಯವರು ಹುಲಿ ಗಣತಿ ಕಾರ್ಯ ನಡೆಸಲು ಉದ್ದೇಶಿಸಿದ್ದರು. ಜೊತೆಗೆ ಇತರೆ ಪ್ರಾಣಿ-ಪಕ್ಷಿಗಳ ಅಧ್ಯಯನಕ್ಕೆ ಸಹ ಈ ಕ್ಯಾಮರಾ ಸಹಕಾರಿಯಾಗಿತ್ತು.
ಫೆ 27ರಂದು ಕ್ಯಾಮರಾ ಪರಿಶೀಲನೆಗಾಗಿ ಕ್ಯಾಸಲರಾಕ್ ವನ್ಯಜೀವಿ ವಲಯದ ಉಪವಲಯ ಅರಣ್ಯಾಧಿಕಾರಿ ಶಿವಾನಂದ ಇಂಚಲ ಕಾಡಿಗೆ ಹೋಗಿದ್ದರು. ಅಲ್ಲಿ ಎಷ್ಟು ಹುಡುಕಿದರೂ ಒಂದು ಕ್ಯಾಮರಾ ಕಾಣಲಿಲ್ಲ. ಸ್ಥಳದಲ್ಲಿದ್ದ ಇನ್ನೊಂದು ಕ್ಯಾಮರಾವನ್ನು ಅವರು ಹಿಡಿದು ಕಚೇರಿಗೆ ಮರಳಿದರು. ಆ ಕ್ಯಾಮರಾವನ್ನು ಪರಿಶೀಲಿಸಿದಾಗ ವ್ಯಕ್ತಿಗಳಿಬ್ಬರು ಮೊದಲ ಕ್ಯಾಮರಾ ಅಪಹರಿಸಿರುವುದು ಗಮನಕ್ಕೆ ಬಂದಿತು. ಫೆ 27ರ ಬೆಳಗ್ಗೆ 11.20ಕ್ಕೆ ಕಾಡು ಪ್ರವೇಶಿಸಿದ್ದ ಇಬ್ಬರು ಕ್ಯಾಮರಾ ಕದ್ದು ಪರಾರಿಯಾಗಿದ್ದರು.
ಆದರೆ, ಆ ಇಬ್ಬರು ವ್ಯಕ್ತಿಗಳ ಗುರುತು ಅರಣ್ಯಾಧಿಕಾರಿಗಳಿಗೆ ಸಿಗಲಿಲ್ಲ. 22 ಸಾವಿರ ರೂ ಮೌಲ್ಯದ ಕ್ಯಾಮರಾ ಕಳ್ಳತನವಾಗಿರುವ ಬಗ್ಗೆ ಶಿವಾನಂದ ಇಂಚಲ ಇದೀಗ ರಾಮನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸಹ ಕ್ಯಾಮರಾಗಾಗಿ ಕಳ್ಳರ ಹುಡುಕಾಟ ನಡೆಸಿದ್ದಾರೆ.