`ಅರಣ್ಯ ಅತಿಕ್ರಮಣದಾರರಿಗೆ ಹಕ್ಕು ಪತ್ರ ಸಿಗಲು ಅರಿವಿನ ಕೊರತೆ ಮುಖ್ಯ ಕಾರಣವಲ್ಲ. ಸರ್ಕಾರದ ಇಚ್ಚಾಶಕ್ತಿ ಕೊರತೆಯಿಂದ ಅರಣ್ಯ ಅತಿಕ್ರಮಣದಾರರು ಅತಂತ್ರರಾಗಿದ್ದು, ಅರಣ್ಯ ಹಕ್ಕು ಹೋರಾಟದ ವಿಷಯದಲ್ಲಿ ಕೆಲವರು ಅತಿಕ್ರಮಣದಾರರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಆರೋಪಿಸಿದೆ.
ಅಂಕೋಲಾದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತರಾಮ ನಾಯಕ ಹಾಗೂ ಜಿಲ್ಲಾ ಕಾರ್ಯದರ್ಶಿ ಶ್ಯಾಮನಾಥ ನಾಯ್ಕ ಕದ್ರಾ ನೇತ್ರತ್ವದಲ್ಲಿ ಸದಸ್ಯರು ಸೋಮವಾರ ಸಭೆ ನಡೆಸಿದರು. ಈ ಸಭೆಯಲ್ಲಿ `ಅರಣ್ಯ ಸಾಗುವಳಿದಾರರ ವೇದಿಕೆಯ ಅಧ್ಯಕ್ಷರ ಜೊತೆ ಆಡಳಿತ ಪಕ್ಷದ ಮುಖಂಡರು ಸಹ ಅತಿಕ್ರಮಣದಾರರ ದಿಕ್ಕು ತಪ್ಪಿಸುತ್ತಾರೆ’ ಎಂಬ ವಿಷಯದ ಬಗ್ಗೆ ಚರ್ಚೆ ನಡೆಯಿತು. ಇದರಿಂದ ಅರಣ್ಯ ಹಕ್ಕು ಪಡೆಯಲು ನಡೆಯುತ್ತಿರುವ ನೈಜ ಹೋರಾಟಕ್ಕೆ ಹಿನ್ನಡೆಯಾಗುತ್ತಿರುವ ಬಗ್ಗೆಯೂ ನೆರೆದಿದ್ದವರು ಕಳವಳವ್ಯಕ್ತಪಡಿಸಿದರು.
`ಹಲವು ಮಂತ್ರಿ, ಮಾಜಿ ನ್ಯಾಯಾಧೀಶರ ಜೊತೆ ಮಾತನಾಡುವ ಹೋರಾಟ ವೇದಿಕೆ ಅಧ್ಯಕ್ಷರು ಆಡಳಿತ ಪಕ್ಷದ ಮುಖಂಡರು ಹೌದು. ನೇರವಾಗಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ವಿವರಿಸಲು ಸಾಧ್ಯವಿದ್ದರೂ ಅವರು ಅದನ್ನು ಮಾಡುತ್ತಿಲ್ಲ. ಅರಣ್ಯ ಹಕ್ಕು ಹೋರಾಟವನ್ನು ರಾಜಕೀಯವಾಗಿ ಬಳಸಿಕೊಂಡು ವಿಪ ಸದಸ್ಯ ಸ್ಥಾನ ಹಾಗೂ ವಿವಿಧ ಪ್ರಶಸ್ತಿಗೆ ಪ್ರಯತ್ನಿಸುತ್ತಿರುವುದು ಸರಿಯಲ್ಲ’ ಎಂದು ಸಭೆಯಲ್ಲಿದ್ದವರು ಹೇಳಿದರು.
`ಅರಣ್ಯ ಹಕ್ಕು ನೀಡಲು 75 ವರ್ಷದ ಹಿಂದಿನ ದಾಖಲೆ ಕೇಳುತ್ತಿರುವುದು ಅಡ್ಡಿಯಾಗಿದೆ. ಕೇಂದ್ರ ಸರ್ಕಾರ ಅರಣ್ಯ ಕಾಯ್ದೆಗೆ ತಿದ್ದುಪಡಿ ತರಬೇಕು. ಆಗ ಮಾತ್ರ 2005ರವರೆಗಿನ ಅರಣ್ಯ ಅತಿಕ್ರಮಣದಾರರಿಗೆ ಭೂಮಿ ಸಿಗಲು ಸಾಧ್ಯವಿದ್ದು, ಈ ಹಿನ್ನಲೆ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಅಖಿಲ ಭಾರತ ಕಿಸಾನ್ ಸಭಾ ಹೋರಾಟ ನಡೆಸಲು ನಿರ್ಧರಿಸಿದೆ’ ಎಂದು ಶಾಂತಾರಾಮ ನಾಯಕ ತಿಳಿಸಿದರು.
ಸದಸ್ಯತ್ವ ಅಭಿಯಾನ:
ಕರ್ನಾಟಕ ಪ್ರಾಂತ ರೈತ ಸಂಘ ಸದಸ್ಯತ್ವ ಅಭಿಯಾನ ಮಾರ್ಚ 24ರಂದು ಜಿಲ್ಲೆಯಾದ್ಯಂತ ನಡೆಯಲಿದೆ. ರೈತರು ಸಂಘದ ಸದಸ್ಯತ್ವಪಡೆದು ಸಂಘಟನಾತ್ಮಕ ಹೋರಾಟಕ್ಕೆ ಸಜ್ಜಾಗಬೇಕು ಎಂದು ಜಿಲ್ಲಾ ಸಮಿತಿಯವರು ಈ ವೇಳೆ ವಿನಂತಿಸಿದರು. ಪ್ರಮುಖರಾದ ಪ್ರೇಮಾನಂದ ವೇಳಿಪ್ ಜೊಯಿಡಾ, ಬುಜಂಗ ಚಿಬ್ಬಲಕರ ಹಳಿಯಾಳ, ಸಹದೇವ ತೆಗ್ನೋಳಕರ, ಗೌರೀಶ ನಾಯಕ, ಸಂತೋಷ ನಾಯ್ಕ ಅಂಕೋಲಾ, ತಿಮ್ಮಪ್ಪ ಗೌಡ ಹೊನ್ನಾವರ, ನಾಗಪ್ಪ ಯಲ್ಲಾಪುರ, ಗಣೇಶ ಪಟಗಾರ ಇತರರು ಇದ್ದರು.