ಅನಧಿಕೃತ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಉದ್ದೇಶದಿಂದ ಪರಿಸರವಾದಿ ಸಂಘಟನೆಗಳು ಸುಪ್ರೀಂ ಕೋರ್ಟಿಗೆ ದಾಖಲಿಸಿದ ಅರ್ಜಿ ಏಪ್ರಿಲ್ 2ಕ್ಕೆ ವಿಚಾರಣೆಗೆ ಬಂದಿದೆ. ಆ ದಿನ ಹೋರಾಟಗರರ ವೇದಿಕೆಯು ಅರಣ್ಯ ಭೂಮಿ ಹಕ್ಕಿನ ದಾಖಲೆಯ ಸ್ಪಷ್ಟಿಕರಣ ವಿಷಯವಾಗಿ ವಾದ ಮಂಡಿಸಲು ಸಜ್ಜಾಗಿದೆ.
ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಈ ಬಗ್ಗೆ ಮಾಹಿತಿ ನೀಡಿದ್ದು, `ಅರಣ್ಯ ಭೂಮಿ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕಾರವಾದ ಅರಣ್ಯವಾಸಿಗಳನ್ನು ಒಕ್ಕಲೇಬ್ಬಿಸಬೇಕು ಎಂದು ಅರ್ಜಿ ಸಲ್ಲಿಸಿರುವುದು ಸರಿಯಲ್ಲ. ಆ ಪ್ರದೇಶಗಳನ್ನು ಅರಣ್ಯ ಮಾಡಿದರೆ ಅಲ್ಲಿ ಬದುಕು ಕಟ್ಟಿಕೊಂಡ ಜನ ಸಮಸ್ಯೆ ಅನುಭವಿಸುತ್ತಾರೆ. 8 ಪರಿಸರ ಸಂಘಟನೆಗಳು 2008ರಲ್ಲಿ ಸುಪ್ರೀಂ ಕೋರ್ಟನಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ಸಲ್ಲಿಸಿದ್ದು, ಅರಣ್ಯವಾಸಿಗಳ ಪರ ಹೋರಾಟ ವೇದಿಕೆ ನ್ಯಾಯಾಲಯದ ಮನವರಿಕೆ ಪ್ರಯತ್ನ ನಡೆಸಲಿದೆ’ ಎಂದು ತಿಳಿಸಿದರು.
`ಪಾರಂಪರಿಕ ಅರಣ್ಯವಾಸಿಗಳಿಗೆ ಮೂರು ತಲೆಮಾರಿನ ವಯಕ್ತಿಕ ದಾಖಲೆ ಕೇಳುವುದು ತಪ್ಪು. ಕಾನೂನನ್ನ ಅಪಾರ್ತವಾಗಿ ಅರಿತ ಕಾರಣ ಅರಣ್ಯವಾಸಿಗಳು ಅರಣ್ಯ ಭೂಮಿ ಹಕ್ಕಿನಿಂದ ವಂಚಿತರಾಗಿದ್ದಾರೆ. ವಯಕ್ತಿಕ ದಾಖಲೆ ಒತ್ತಾಯಿಸತ್ತಕ್ಕದ್ದಲ್ಲ ಎಂಬುವುದನ್ನು ಅರಣ್ಯ ಹಕ್ಕು ಕಾಯಿದೆ ಮತ್ತು ಕೇಂದ್ರ ಬುಡಕಟ್ಟು ಮಂತ್ರಾಲಯ ಸ್ಪಷ್ಟವಾಗಿ ಉಲ್ಲೇಖಿಸಿದೆ’ ಎಂದವರು ಪುನರುಚ್ಚರಿಸಿದರು.
ರಾಜ್ಯದಲ್ಲಿ ವ್ಯತಿರಿಕ್ತವಾಗಿ ಅರಣ್ಯವಾಸಿಗಳ ವಿರುದ್ಧ ಹಕ್ಕು ಸಮಿತಿಗಳು ಆದೇಶ ನೀಡುತ್ತಿರುವ ಕುರಿತು ದಾಖಲೆಗಳನ್ನು ಸುಪ್ರೀಂ ಕೋರ್ಟನ ವಿಚಾರಣೆ ಸಂದರ್ಭದಲ್ಲಿ ಹಾಜರಪಡಿಸಲಾಗುತ್ತದೆ ಎಂದವರು ತಿಳಿಸಿದರು.