ಅಕ್ರಮವಾಗಿ ಅರಣ್ಯ ಭೂಮಿಯಲ್ಲಿ ನೆಲೆಸಿರುವ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಬೇಕು ಎಂದು ಎಂಟು ಪರಿಸರ ಸಂಘಟನೆಗಳು ಸಲ್ಲಿಸಿದ ಅರ್ಜಿ ಬುಧವಾರ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ ಬರಲಿಲ್ಲ.
`ಪರಿಸರ ಸಂಘಟನೆಗಳು ಸುಪ್ರೀಂ ಕೋರ್ಟನಲ್ಲಿ ಅನಧಿಕೃತ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸಬೇಕು’ ಎಂದು ಅರ್ಜಿ ಸಲ್ಲಿಸಿದ್ದರು. `ಅತಿಕ್ರಮಿಸಿದ ಕ್ಷೇತ್ರದಲ್ಲಿ ಅರಣ್ಯ ಬೆಳಸಬೇಕು’ ಎಂದು ಮನವಿ ಮಾಡಿದ್ದರು. ಇದಕ್ಕೆ ವಿರುದ್ಧವಾಗಿ 144 ಸಂಘಟನೆಗಳು ಅರಣ್ಯ ಅತಿಕ್ರಮಣದಾರರ ಸಮಸ್ಯೆ ಬಗ್ಗೆ ನ್ಯಾಯಾಲಯಕ್ಕೆ ಪತ್ರ ಬರೆದಿದ್ದವು. ವಿವಿಧ ಕಾನೂನು ಅಂಶಗಳನ್ನು ಉಲ್ಲಂಘಿಸಿ ಅರಣ್ಯ ಅತಿಕ್ರಮಣದಾರರಿಗೆ ಭೂಮಿ ಹಕ್ಕು ನೀಡುವ ಬಗ್ಗೆ ಮನವಿ ಮಾಡಿದ್ದವು. ಈ ಹಿನ್ನಲೆ ಬುಧವಾರದ ವಿಚಾರಣೆ ಮಹತ್ವಪೂರ್ಣದ್ದಾಗಿದ್ದು, ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದರು.
2025ರ ಜನವರಿ 23ರಂದೇ ಅರ್ಜಿ ವಿಚಾರಣೆ ನಡೆಯಬೇಕಿತ್ತು. ಆ ದಿನ ಮುಂದಿನ ವಿಚಾರಣೆಯನ್ನು ಏಪ್ರಿಲ್ 2ರಂದು ನ್ಯಾಯಾಲಯ ನಿಗದಿ ಮಾಡಿತ್ತು. ಆದರೆ, ಈ ದಿನ ಸುಪ್ರೀಂ ಕೋರ್ಟ ಈ ಪ್ರಕರಣದ ವಿಚಾರಣೆಗೆ ದಿನ ನಿಗದಿಪಡಿಸಿದ್ದರೂ ವಿಚಾರಣಾ ಪಟ್ಟಿಯ ಯಾದಿಯಲ್ಲಿ ಅರ್ಜಿ ಸಲ್ಲಿಕೆಯಾಗಿರಲಿಲ್ಲ. ವಿಚಾರಣೆಗಾಗಿ ಸಾಕಷ್ಟು ಪ್ರಕರಣಗಳಿರುವುದರಿಂದ ಅರ್ಜಿ ವಿಚಾರಣಾ ಪಟ್ಟಿಗೆ ಸೇರ್ಫಡೆ ಆಗಲಿಲ್ಲ.
ಸದ್ಯ, ಸುಪ್ರೀಂ ಕೋರ್ಟಿನ ಮೂರನೇ ಸಂಭಾಗಣದಲ್ಲಿ ನ್ಯಾಯಮೂರ್ತಿ ಸೂರ್ಯಕಾಂತ, ನ್ಯಾಯಮೂರ್ತಿ ದೀಪಾನಕರ್ ದತ್ತ ಮತ್ತು ನ್ಯಾಯಮೂರ್ತಿ ಉಜ್ಜಲ್ ಭೂಯನ್ ಸದಸ್ಯರ ಪೀಠವೂ ಪ್ರಕರಣ ಅಂತಿಮ ವಿಚಾರಣೆ ನಡೆಸುವುದು ಬಾಕಿಯಿದೆ. `ನ್ಯಾಯಾಲಯವು ಮುಂದಿನ ವಿಚಾರಣೆ ನಿಗದಿಗೊಳಿಸಿ ಬಡ ಅತಿಕ್ರಮಣದಾರರಿಗೆ ನ್ಯಾಯ ಕೊಡಿಸಬೇಕು’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಮನವಿ ಮಾಡಿದ್ದಾರೆ.