`1980ರ ಅವಧಿಯಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಿದ ಅರಣ್ಯ ರಕ್ಷಣಾ ಕಾಯ್ದೆಯನ್ನು ಕಾನೂನುಬದ್ಧವಾಗಿ ಜಾರಿ ಮಾಡುವಲ್ಲಿ ವಿಫಲವಾದ ಪರಿಣಾಮ ಅರಣ್ಯ ಅತಿಕ್ರಮಣದಾರರು ಸಮಸ್ಯೆ ಅನುಭವಿಸುತ್ತಿದ್ದಾರೆ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ವಿಶ್ಲೇಷಿಸಿದ್ದಾರೆ.
`ದೇಶದ ಅರಣ್ಯ ಭೂಮಿ ರಕ್ಷಣೆ ಮತ್ತು ಸಂರಕ್ಷಣೆ ಉದ್ದೇಶದಿಂದ 1980ರಲ್ಲಿ ಅರಣ್ಯ ಸಂರಕ್ಷಣಾ ಕಾಯಿದೆ ಜಾರಿ ಮಾಡಲಾಯಿತು. ಆದರೆ, ಅದನ್ನು ಅನುಷ್ಠಾನ ಮಾಡುವಲ್ಲಿ ಸರ್ಕಾರ ಎಡವಿತು’ ಎಂದವರು ಹೇಳಿದ್ದಾರೆ. `ಪರಿಸರ ಸಮತೋಲನ ದೃಷ್ಟಿಯಲ್ಲಿ ಅರಣ್ಯ ಸಾಂಧ್ರತೆಯನ್ನು ಕಾಪಾಡುವುದು ಅತಿ ಮುಖ್ಯ. ಅರಣ್ಯ ರಕ್ಷಿಸುವುದು ಸಹ ಪ್ರತಿಯೊಬ್ಬರ ಜವಾಬ್ದಾರಿ. ಅದರಂತೆ, ಅರಣ್ಯ ಭೂಮಿಯಲ್ಲಿ ವಾಸ್ತವ್ಯ ಮತ್ತು ಸಾಗುವಳಿ ಮಾಡುತ್ತಿರುವ ಅರಣ್ಯವಾಸಿಗಳ ಭೂಮಿ ಹಕ್ಕಿನ ಸಮಸ್ಯೆ ಬಗೆÀರಿಸುವುದು ಸರ್ಕಾರದ ಕರ್ತವ್ಯ’ ಎಂದು ರವೀಂದ್ರ ನಾಯ್ಕ ನೆನಪಿಸಿದ್ದಾರೆ.
ಮಾರ್ಚ 15ರಂದು ಶಿರಸಿಯ ಬಂಡಲ್ ಭಾಗದಲ್ಲಿ ಅರಣ್ಯವಾಸಿಗಳ ಕಾನೂನು ಜಾಗೃತಾ ಜಾಥಾ ನಡೆದಿದ್ದು, ಅದರಲ್ಲಿ ಭಾಗವಹಿಸಿದ ರವೀಂದ್ರ ನಾಯ್ಕ ಕಾನೂನು ಅಧ್ಯಯನದ ವಿಶ್ಲೇಷಣೆ ಮಾಡಿದರು. `ಅರಣ್ಯ ಸಂರಕ್ಷಣಾ ಕಾಯಿದೆಯನ್ನು ಅರಣ್ಯ ಇಲಾಖೆ ಕಟ್ಟುನಿಟ್ಟಾಗಿ ಪಾಲಿಸಲಿಲ್ಲ. ಹೀಗಾಗಿ ಅರಣ್ಯವಾಸಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಅರಣ್ಯ ಇಲಾಖೆ ಕಾನೂನಿನ ಮೂಲಕ ಅರಣ್ಯ ರಕ್ಷಣೆ ನಿಯಂತ್ರಿಸದಿರುವುದೇ ಅರಣ್ಯವಾಸಿಗಳ ಒಕ್ಕಲೆಬ್ಬಿಸುವಿಕೆಯ ಸಮಸ್ಯೆಗೆ ಕಾರಣ’ ಎಂದವರು ಪುನರುಚ್ಚರಿಸಿದರು.
`ಉತ್ತರ ಕನ್ನಡ ಜಿಲ್ಲೆಯಲ್ಲಿ 1978 ಪೂರ್ವದ 2,513 ಕುಟುಂಬಗಳಿಗೆ 3,235 ಎಕರೆ ಕ್ಷೇತ್ರ ಮಂಜೂರಿಗೆ ಕೇಂದ್ರ ಸರ್ಕಾರ 1996ರಲ್ಲಿಯೇ ಅನುಮೋದನೆ ನೀಡಿದೆ. ಅನುಮೋದನೆ ನೀಡಿ 29 ವರ್ಷಗಳಾದರೂ ಅರಣ್ಯ ಭೂಮಿ ಹಕ್ಕು ನೀಡಲು ರಾಜ್ಯ ಸರ್ಕಾರ ವಿಫಲವಾಗಿದೆ’ ಎಂದವರು ವಿವರಿಸಿದರು.
ಬಂಡಲ್ ಗ್ರಾಮಪಂಚಾಯತಿ ಅಧ್ಯಕ್ಷ ದೇವರಾಜ ಮರಾಠಿ, ಹೋರಾಟಗಾರರಾದ ಇಬ್ರಾಹಿಂ ಗೌಡಳ್ಳಿ, ಚಂದ್ರು ಶಾನಭಾಗ, ಸ್ವಾತಿ ಜೈನ್, ಕೃಷ್ಣ ಮರಾಠಿ, ಬಾಬು ಮರಾಠಿ, ಯಶ್ವಂತ ನಾಯ್ಕ ಮುಂತಾದವರು ಮಾತನಾಡಿದ್ದರು. ಪ್ರಮುಖರಾದ ಕಿರಣ ಮರಾಠಿ, ಗಜಾನನ ಗೌಡ, ಮಂಜುನಾಥ ನಾಯ್ಕ, ನಾಗರಾಜ ಹೆಗಡೆ, ಹರೀಶ ಮರಾಠಿ ಮುಂತಾದವರು ಉಪಸ್ಥಿತರಿದ್ದರು.