ಪದ್ಮಶ್ರೀ ಸುಕ್ರಿ ಗೌಡ ಹಾಗೂ ತುಳಸಿ ಗೌಡ ಅವರ ನೆನಪನ್ನು ಶಾಶ್ವತವಾಗಿರಲು ಮಂಗಳೂರಿನ `ಸಹ್ಯಾದ್ರಿ ಸಂಚಯ’ ತಂಡದವರು ಉತ್ತರ ಕನ್ನಡ ಜಿಲ್ಲೆಯಲ್ಲಿ ವರ್ಷವಿಡೀ `ವನ ಚೇತನ’ ಕಾರ್ಯಕ್ರಮ ನಡೆಸಲು ನಿರ್ಧರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಈ ಇಬ್ಬರು ಸಾಧಕರ ಆದರ್ಶಗಳ ಬಗ್ಗೆ ಅರಿವು ಮೂಡಿಸಲಿದ್ದಾರೆ.
ಸುಕ್ರಿ ಬೊಮ್ಮ ಗೌಡರ ಜಾನಪದ ಹಾಡುಗಳು ಇಂದಿನ ಸಮಾಜಕ್ಕೆ ತಿಳಿಸಬೇಕು. ಯುವ ಜನಾಂಗಕ್ಕೆ ಅದರ ಮಹತ್ವದ ಬಗ್ಗೆ ಸಾರಬೇಕು. ತುಳಸಿ ಗೌಡರ ಪ್ರಕೃತಿ, ಗಿಡ – ಮರಗಳ ಬಗ್ಗೆ ಅಧ್ಯಯನ, ಅವರಲ್ಲಿದ್ದ ಜ್ಞಾನ ಪ್ರಸರಣ ಮುಖ್ಯವಾಹಿನಿಗೆ ಬರಬೇಕು ಎಂಬುದು ವನ ಚೇತನಾದ ಉದ್ದೇಶ. `ಜಾನಪದ ಹಾಗೂ ಪರಿಸರ ಕ್ಷೇತ್ರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸುಕ್ರಿ ಗೌಡ ಹಾಗೂ ತುಳಸಿ ಗೌಡ ಅವರ ಕೊಡುಗೆ ಅಪಾರ. ಅವರಿಬ್ಬರ ಸಾಧನೆ, ಶ್ರಮ, ಪರಿಣತಿ, ಹೋರಾಟ, ಅಧ್ಯಯನ, ಕಾರ್ಯ ಚಟುವಟಿಕೆಗಳು ಎಲ್ಲಡೆ ನಿರಂತರವಾಗಿ ಬೆಳಗಬೇಕು ಎಂಬ ಉದ್ದೇಶದಿಂದ ನಿರಂತರ ಕಾರ್ಯಕ್ರಮ ಆಯೋಜಿಸಲಾಗುತ್ತದೆ’ ಎಂದು ವನ ಚೇತನ ರೂವಾರಿ ದಿನೇಶ ಹೊಳ್ಳ ಹೇಳಿದ್ದಾರೆ.
`ಅಂಕೋಲಾದ ಮೇಲಿನಗುಳಿ ಶಾಲೆಯಲ್ಲಿ ವನ ಚೇತನ ಕಾರ್ಯಕ್ರಮ ಮಾಡುವಾಗ ಅಲ್ಲಿನ ಸ್ಥಳೀಯ ಹಾಲಕ್ಕಿ ಮಹಿಳೆಯರು ಆಗಮಿಸಿ ಸುಕ್ರಿ ಗೌಡರ ಜಾನಪದ ಗೀತೆಗಳನ್ನು ಹಾಡಿದರು. ಅಲ್ಲಿನ ಶಿಕ್ಷಕಿ ಮಾಲತಿ ಅವರು ಮಕ್ಕಳಿಗೆ ಹಾಡುಗಳನ್ನು ಕಲಿಸಿದರು. ಸುಕ್ರಿ ಅಜ್ಜಿಯ ಹಾಡುಗಳು ಹೀಗೇ ಮುಂದುವರಿದರೆ ಅಜ್ಜಿಯ ಶ್ರಮ ಸಾರ್ಥಕವಾದೀತು’ ಎಂದು ದಿನೇಶ ಹೊಳ್ಳ ಅಭಿಪ್ರಾಯಪಟ್ಟಿದ್ದಾರೆ.
`ವನ ಚೇತನಾ ತಂಡವು ಮುಂದಿನ ವರ್ಷದಿಂದ ಅಂಕೋಲಾದ ಶಾಲಾ ಕಾರ್ಯಕ್ರಮದಲ್ಲಿ ಸುಕ್ರಿ ಅಜ್ಜಿಯ ಹಾಡುಗಳ ಬಗ್ಗೆ ಮಕ್ಕಳಿಗೆ ತರಬೇತಿ ನೀಡಲಿದೆ. ಈ ಇಬ್ಬರು ಪದ್ಮಶ್ರೀ ಮಾತೆಯರ ನೆನಪಿಗಾಗಿ ಅಂಕೋಲಾದಲ್ಲಿ ಒಂದು ಸಮಿತಿ ರಚಿಸಿ ಅವರ ಸಾಧನೆ, ಪರಿಶ್ರಮ, ಚಟುವಟಿಕೆ ಉಳಿಸುವ ಅಭಿಲಾಷೆ ಹೊಂದಲಾಗಿದೆ’ ಎಂದವರು ಹೇಳಿದ್ದಾರೆ.