ಜೊಯಿಡಾದ ಕೃಷ್ಣ ಗಾಂವಕರ ಕಾಳಿ – ಕಾನೇರಿ ನದಿ ಸಂಗಮ ಪ್ರದೇಶದ ನೀರಿನಲ್ಲಿ ಬಿದ್ದು ಬದುಕು ಕಳೆದುಕೊಂಡಿದ್ದಾರೆ.
ಗು0ದ ಕೆರೆಗದ್ದೆಯಲ್ಲಿ ಕೃಷ್ಣ ಗಾಂವಕರ (48) ಕುಟುಂಬದವರ ಜೊತೆ ವಾಸವಾಗಿದ್ದರು. ಏಪ್ರಿಲ್ 17ರಂದು ಅವರು ಅರಣ್ಯ ಇಲಾಖೆಯ ಕೆಲಸಕ್ಕೆ ನಿಯೋಜನೆಗೊಂಡಿದ್ದರು. ಅದೇ ಊರಿನ ಮಂಜುನಾಥ ದೇಸಾಯಿ, ಅವಿನಾಶ ಆಚಾರಿ ಹಾಗೂ ಮಂಜುನಾಥ ಮಾಸ್ಕರ್ ಜೊತೆ ಬೆಟ್ಟಕ್ಕೆ ಹೋಗಿದ್ದರು. ಅರಣ್ಯ ಇಲಾಖೆ ಸೂಚನೆ ಮೇರೆಗೆ ಅಲ್ಲಿದ್ದ ಮರಗಳ ಕಟಾವು ನಡೆಸುತ್ತಿದ್ದರು.
ಈ ನಡುವೆ ಕೃಷ್ಣ ಗಾಂವಕರ ಅವರಿಗೆ ಮೀನು ಹಿಡಿಯುವ ಬಯಕೆಯಾಯಿತು. ತಾವು ತಂದಿದ್ದ ಬಲೆಯ ಜೊತೆ ಅವರು ಮಧ್ಯಾಹ್ನ ಕಾಳಿ-ಕಾನೇರಿ ನದಿ ಸಂಗಮದಲ್ಲಿ ಮೀನು ಹಿಡಿಯಲು ಹೋದರು. ನೀರಿನ ನಡುವೆ ಸಿಲುಕಿದವರಿಗೆ ಮೇಲೆ ಬರಲು ಆಗಲಿಲ್ಲ. ಸಂಜೆಯಾದರೂ ಮರಳದ ಕಾರಣ ಜೊತೆಗಿದ್ದವರು ಕೃಷ್ಣ ಗಾಂವಕರ ಅವರ ಹುಡುಕಾಟ ನಡೆಸಿದರು. ಆದರೆ, ಅವರು ಎಲ್ಲಿಯೂ ಕಾಣಲಿಲ್ಲ.
ವಿಷಯ ತಿಳಿದ ಅರಣ್ಯ ಸಿಬ್ಬಂದಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಎಲ್ಲರೂ ಬಂದು ಹುಡುಕಾಟ ಮುಂದುವರೆಸಿದರು. ಶನಿವಾರ ಅವರ ಶವ ಸಿಕ್ಕಿತು. ಕಾಡಿನ ಕೆಲಸಕ್ಕೆ ಹೋದ ಪತಿ ನೀರಿನಲ್ಲಿ ಮುಳುಗಿ ಸಾವನಪ್ಪಿದ ಬಗ್ಗೆ ಸುಜಾತಾ ಗಾಂವಕಾರ ಅವರು ಜೊಯಿಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು.