ಕಾರವಾರ: ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿನ ಸಾರ್ವಜನಿಕರಿಗೆ ಸ್ವಚ್ಛತೆ ಮತ್ತು ನೈರ್ಮಲ್ಯದ ಕುರಿತಂತೆ ಜಿಲ್ಲೆಯಾದ್ಯಂತ ಸೆಪ್ಟಂಬರ್ 17ರಿಂದ ಆಯೋಜಿಸುವ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಕಾರ್ಯಕ್ರಮದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದ ಕುರಿತಂತೆ ವಿವಿಧ ಚಟುವಟಿಕೆ ನಡೆಸಬೇಕು’ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ ಹೇಳಿದರು.
`ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ಖWS/ಐಂಃ ಕಟ್ಟಡಗಳು/ ಶೌಚಾಲಯಗಳು ಆವರಣದಲ್ಲಿ ಶ್ರಮದಾನ ಮಾಡುವ ಮೂಲಕ ಸಂಪೂರ್ಣ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದರು. `ಹಳ್ಳಿಗಳಲ್ಲಿ ಸ್ವಚ್ಛತೆ ಕಾಪಾಡಲು ಶ್ರಮದಾನ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಗ್ರಾಮದ ಪ್ರಮುಖ ಬೀದಿ, ಶಾಲಾ ಆವರಣ, ಆಟದ ಮೈದಾನ, ಕಲ್ಯಾಣಿ, ಧಾರ್ಮಿಕ ಕೇಂದ್ರಗಳ ಸಮೀಪ ಸ್ವಚ್ಛತಾ ಕಾರ್ಯಕ್ರಮಗಳನ್ನು ಆಯೋಜಿಸಬೇಕು, ಗ್ರಾಮದ ಅತ್ಯಂತ ಹೆಚ್ಚು ತ್ಯಾಜ್ಯ ಸಂಗ್ರಹವಾಗುವ ಪ್ರದೇಶ ಮತ್ತು ಅಧಿಕ ಅನೈರ್ಮಲ್ಯ ಇರುವ ಸ್ಥಳ – ಬೀದಿ ಹಾಗೂ ಗಲೀಜು ಇರುವ ಸ್ಥಳಗಳನ್ನು ಗುರತಿಸಿ ಸ್ವಚ್ಛಗೊಳಿಸಬೇಕು’ ಎಂದರು.
`ಶೌಚಾಲಯ ಬಳಕೆ ಕುರಿತು ಪ್ರಭಾತ್ ಪೇರಿ ಚಟುವಟಿಕೆಗಳನ್ನು ಆಯೋಜಿಸಬೇಕು, ಸಫಾಯಿ ಮಿತ್ರ ಸುರಕ್ಷಾ ಶಿಬಿರಗಳ ಆಯೋಜನೆ, ಶಾಲಾ ಮಕ್ಕಳಲ್ಲಿ ಸ್ಲೋಗನ್ ಬರೆಯುವ ಸ್ಪರ್ಧೆ ಆಯೋಜಿಸಬೇಕು. ಸ್ವಚ್ಛತಾ ಕಾರ್ಮಿಕರಿಗೆ ಸನ್ಮಾನ ಮತ್ತು ಓಡಿಎಪ್ ಪ್ಲಸ್ ಸುಸ್ಥಿರತೆ ಅಂಶಗಳ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು’ ಎಂದರು.
`ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸಿ ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧಿಸಬೇಕು. ಜಿಲ್ಲೆಯ ಗುರುತಿಸಲ್ಪಟ್ಟ 36 ಪ್ರವಾಸಿ ತಾಣಗಳಲ್ಲಿ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಾಲಯಗಳನ್ನು ಗುರುತಿಸಿ ಸುತ್ತ ಮುತ್ತ ಸ್ವಚ್ಛತಾ ಅಭಿಯಾನ ಕೈಗೊಳ್ಳಬೇಕು’ ಎಂದರು. `ಗ್ರಾಮೀಣ ಪ್ರದೇಶದಲ್ಲಿ ಉತ್ಪತ್ತಿಯಾಗುವ ಕಸವನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸುವ ಕುರಿತಂತೆ ಸ್ವ ಸಹಾಯ ಸಂಘದ ಸದಸ್ಯರಿಗೆ ಅರಿವು ಮೂಡಿಸುವ ಚುವಟಿಕೆಗಳನ್ನು ಕೈಗೊಳ್ಳಬೇಕು. ಎಲ್ಲಾ ಗ್ರಾಮ ಪಂಚಾಯತ್ಗಳಲ್ಲಿ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಬೇಕು. ಜಿಲ್ಲೆಯ ಎಲ್ಲಾ ಸ್ವಚ್ಛತಾ ಕಾರ್ಮಿಕರಿಗೆ ವಿವಿಧ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಕುರಿತಂತೆ ಅವರಿಗೆ ಮಾಹಿತಿ ನೀಡಬೇಕು ಎಂದು ಅವರು ಈ ಪಾಕ್ಷಿಕದ ಅವಧಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿರುವ ಸಮುದಾಯ ಶೌಚಾಲಯಗಳ ಬಳಕೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದರ ಜೊತೆಗೆ ಈ ಶೌಚಾಲಯಗಳು ನಿರುಪಯುಕ್ತವಾಗಿದ್ದಲ್ಲಿ ಅವುಗಳನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದರು.
ಜಿಲ್ಲೆಯಲ್ಲಿ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಕಾರ್ಯಕ್ರಮವನ್ನು ಅತ್ಯಂತ ಪರಿಣಾಮಕಾರಿಯಾಗಿ ಆಚರಿಸಲು, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಪಂ.ರಾಜ್ ಇಂಜಿನಿಯಿರಿAಗ್ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ (ಆಡಳಿತ) ನಾಗೇಶ್ ರಾಯ್ಕರ್, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಕಲ ಚೇತನರಿಗೆ ಸಿಗಲಿದೆ ಸಾಧನ ಸಲಕರಣೆ
ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಅವಶ್ಯವಿರುವ ಸಾಧನ ಸಲಕರಣೆಗಳ ಶಿಬಿರವನ್ನು ಸೆಪ್ಟಂಬರ್ 17ರಂದು ಜಿಲ್ಲಾ ಆಸ್ಪತ್ರೆ ಕಾರವಾರದಲ್ಲಿ ನಡೆಯಲಿದೆ.
ಸೆಪ್ಟಂಬರ್ 18ರಂದು ತಾಲೂಕಾ ಆಸ್ಪತ್ರೆ ಅಂಕೋಲಾ, ಸೆಪ್ಟಂಬರ್ 19ರಂದು ತಾಲೂಕಾ ಆಸ್ಪತ್ರೆ ಕುಮಟಾ, ಸೆಪ್ಟಂಬರ್ 20ರಂದು ತಾಲೂಕಾ ಆಸ್ಪತ್ರೆ ಹೊನ್ನಾವರ, ಸೆಪ್ಟಂಬರ್ 21ರಂದು ತಾಲೂಕಾ ಆಸ್ಪತ್ರೆ ಭಟ್ಕಳ, ಸೆಪ್ಟಂಬರ್ 23ರಂದು ತಾಲೂಕಾ ಆಸ್ಪತ್ರೆ ಶಿರಸಿ, ಸೆಪ್ಟಂಬರ್ 24ರಂದು ತಾಲೂಕಾ ಆಸ್ಪತ್ರೆ ಸಿದ್ಧಾಪುರ, ಸೆಪ್ಟಂಬರ್ 25 ರಂದು ತಾಲೂಕಾ ಆಸ್ಪತ್ರೆ ಯಲ್ಲಾಪುರ, ಸೆಪ್ಟಂಬರ್ 26 ರಂದು ತಾಲೂಕಾ ಆಸ್ಪತ್ರೆ ಮುಂಡಗೋಡ, ಸೆಪ್ಟಂಬರ್ 27 ರಂದು ತಾಲೂಕಾ ಆಸ್ಪತ್ರೆ ಹಳಿಯಾಳ, ಸೆಪ್ಟಂಬರ್ 28 ರಂದು ತಾಲೂಕಾ ಆಸ್ಪತ್ರೆ ದಾಂಡೇಲಿ, ಸೆಪ್ಟಂಬರ್ 30 ರಂದು ತಾಲೂಕಾ ಆಸ್ಪತ್ರೆಯ ಜೋಯಿಡಾ ಈ ಕಾರ್ಯಕ್ರಮ ನಡೆಯಲಿದೆ.
ವಿಕಲಚೇತನರು ಅವಶ್ಯವಿರುವ ಸಾಧನ ಸಲಕರಣೆಗಳ ಶಿಬಿರಕ್ಕೆ ಆಧಾರ ಕಾರ್ಡ, ರೇಷನ್ ಕಾರ್ಡ, ಯುಡಿಐಡಿ ಕಾರ್ಡ ಮತ್ತು ಫೋಟೊ ಈ ಎಲ್ಲಾ ದಾಖಲಾತಿಗಳನ್ನು ಹಾಗೂ ಹಿರಿಯ ನಾಗರಿಕರು ಆಧಾರ ಕಾರ್ಡ, ರೇಷನ್ ಕಾರ್ಡ, ಮತ್ತು ಫೋಟೊ ಈ ಎಲ್ಲಾ ದಾಖಲಾತಿಗಳನ್ನು ತರಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯನ್ನು ಸಂಪರ್ಕಿಸಿ.
ಈ ಸ್ಪರ್ಧೆ ವಯಸ್ಸಾದವರಿಗೆ ಮಾತ್ರ!
ಪ್ರಸಕ್ತ ಸಾಲಿನ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯ ಉದ್ಘಾಟನೆ ಕಾರ್ಯಕ್ರಮ ಸೆ 19ರಂದು ಬೆಳಗ್ಗೆ 9 ಗಂಟೆಗೆ ನಿವೃತ್ತಿ ನೌಕರ ಸಂಘದಲ್ಲಿ ನಡೆಯಲಿದೆ.
ಕ್ರೀಡಾ ಸ್ಪರ್ಧೆಯನ್ನು ಮಾಲಾದೇವಿ ಕ್ರೀಡಾಂಗಣದಲ್ಲಿ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಸಭಾಭವನದಲ್ಲಿ ನಡೆಯಲಿದೆ. ಕ್ರೀಡಾ ಸ್ಪರ್ಧೆಯಲ್ಲಿ ಬಿರುಸಿನ ನಡಿಗೆ, ಬಕೆಟ್ನಲ್ಲಿ ಬಾಲ್ ಎಸೆಯುವುದು, ಮ್ಯೂಸಿಕಲ್ ಚೇರ್, ಗುಂಡು ಏಸೆತ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಏಕಪಾತ್ರಭಿನಯ, ಗಾಯನ ಸ್ಪರ್ಧೆ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ವಯೋಮಿತಿವಾರು (60-69, 70-79 ಹಾಗೂ ಮೇಲ್ಪಟ್ಟು) ಪುರುಷ ಮತ್ತು ಮಹಿಳೆಯರಿಗೆ ಸ್ಪರ್ಧೆ ನಡೆಯಲಿದೆ.
ಗಾಯನಕ್ಕೆ ಮ್ಯೂಸಿಕನ್ನು (ಕರೋಕಿ) ಬಳಸುವಂತಿಲ್ಲ. ಹಾಗೂ ಚಿತ್ರಕಲೆಗೆ ಬೇಕಾಗುವ ಲೇಖನ ಹಾಗೂ ಇತರೆ ಸಾಧನಗಳನ್ನು ಅಭ್ಯರ್ಥಿಗಳೇ ತರಬೇಕು. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ಏರ್ಪಡಿಸಿಲಾಗುವುದು. ಭಾಗವಹಿಸಲು ಇಚ್ಛಿಸುವ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ತಮ್ಮ ವಯಸ್ಸಿನ ಗುರುತಿನ ಚೀಟಿಯೊಂದಿಗೆ ನೋಂದಣಿ ಮಾಡಿಕೊಳ್ಳಬೇಕು. ಮಾಹಿತಿಗೆ ಸೆ 18ರ ಒಳಗೆ 8762232827ಗೆ ಸಂಪರ್ಕಿಸಿ.