ಸಾರ್ವಜನಿಕ ರಸ್ತೆ ಅಂಚಿನ ಪ್ರದೇಶದಲ್ಲಿ ರಾಜಾರೋಷವಾಗಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಗೋಕರ್ಣ ಪೊಲೀಸರು ದಾಳಿ ಮಾಡಿದ್ದಾರೆ. ಜೂಜಾಟ ಕಾನೂನುಬಾಹಿರ ಎಂದು ಹೇಳಿದರೂ ಕೇಳದವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
ಕುಮಟಾ ಹಿರೆಗುತ್ತಿ ದೇವರಬೋಳೆಯ ರಮಾಕಾಂತ ಪಡ್ತಿ, ಹಿರೆಗುತ್ತಿಯ ರಾಘವೇಂದ್ರ ಹರಿಕಂತ್ರ, ಮಂಜುನಾಥ ಪಡ್ತಿ, ರಾಘವೇಂದ್ರ ಗಾಂವಕಾರ, ಉದಯ ಪಡ್ತಿ ಹಾಗೂ ಕುಮಟಾ ಮದ್ಯಹರಿಜನಕೇರಿಯ ರಾಘವೇಂದ್ರ ಹಳ್ಳರ್ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಫೆ 21ರಂದು ಅವರೆಲ್ಲರೂ ಹಿರೆಗುತ್ತಿಯ ಸೋನಾರಕೇರಿ ರಸ್ತೆ ಅಂಚಿನಲ್ಲಿ ಅಂದರ್ ಬಾಹರ್ ಆಡುತ್ತಿದ್ದರು.
ಹಳದಿ ಬಣ್ಣದ ಮೂರು ಟವೆಲ್ ಹಾಸಿ ಅದರ ಮೇಲೆ ಇಸ್ಪಿಟ್ ಎಲೆಗಳನ್ನು ಹರಡಿಕೊಂಡಿದ್ದಾಗ ಗೋಕರ್ಣ ಪೊಲೀಸ್ ಠಾಣೆಯ ಪಿಎಸ್ಐ ಖಾದರ್ ಭಾಷಾ ದಾಳಿ ಮಾಡಿದರು. 52 ಇಸ್ಪಿಟ್ ಎಲೆಗಳ ಜೊತೆ ಅಲ್ಲಿ ಹರಡಿಕೊಂಡಿದ್ದ 9120ರೂ ಹಣವನ್ನು ಅವರು ವಶಕ್ಕೆ ಪಡೆದರು. ಪ್ರತಿಯೊಬ್ಬರ ಹೆಸರನ್ನು ಪಡೆದು ಪ್ರಕರಣ ದಾಖಲಿಸಿದರು. ಸಿಕ್ಕಬಿದ್ದ ಎಲ್ಲರೂ ಕೂಲಿ ಕಾರ್ಮಿಕರಾಗಿದ್ದಾರೆ.