ಯಲ್ಲಾಪುರ: ಪಂಚಾಯತ ರಾಜ್ ಇಂಜಿನಿಯರಿoಗ್ ಉಪ ವಿಭಾಗ ಕಚೇರಿಯಲ್ಲಿ ಮುತ್ತು ಹಾಗೂ ಹವಳದಿಂದ ಕೂಡಿದ ಗಣಪನ ವಿಗ್ರಹ ಗಮನ ಸೆಳೆಯುತ್ತಿದೆ. ಶಿರಸಿಯ ಚಂದನ ಶಾಲೆಯ ವಿದ್ಯಾರ್ಥಿ ಶ್ರೀಧರ ಸಂಜೀವ ಕೆರೆಕರ ಈ ಮೂರ್ತಿ ರಚಿಸಿದ್ದಾರೆ.
ಕಳೆದ 30 ವರ್ಷಗಳಿಂದ ಈ ಕಚೇರಿಯಲ್ಲಿ ಗಣಪನ ಆರಾಧನೆ ನಡೆಯುತ್ತಿದೆ. ಪ್ರತಿ ವರ್ಷ ಗಣಪತಿ ವಿಗ್ರಹ ಪ್ರತಿಷ್ಠಾಪಿಸಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಕಳೆದ ಕೆಲ ವರ್ಷಗಳಿಂದ ಶ್ರೀಧರ ಸಂಜೀವ ಕೆರೆಕರ್ ಅವರು ಮಣ್ಣಿನಿಂದ ತಯಾರಿಸಿದ ಮೂರ್ತಿಯನ್ನು ಇಲ್ಲಿ ತಂದಿಡುತ್ತಿದ್ದಾರೆ. ಈ ಬಾರಿ ಮುತ್ತು ಹಾಗೂ ಹವಳಗಳಿಂದ ಗಣಪನನ್ನು ಅಲಂಕರಿಸಲಾಗಿದೆ. ಕಚೇರಿ ಅಧಿಕಾರಿ ಅಶೋಕ ಬಂಟ್ ವಿದ್ಯಾರ್ಥಿಯ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದ್ದಾರೆ. ಕಚೇರಿಗೆ ಆಗಮಿಸಿದ ಗುತ್ತಿಗೆದಾರರು ಸಹ ಗಣಪನ ವಿಗ್ರಹ ನೋಡಿ ಹೊಗಳಿದ್ದಾರೆ.
ಶಶಿಕಲಾ ಸಂತೋಷ ಬಾಂದಿವಡೇಕರ ಎಂಬಾತರು ಗಣಪತಿ ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಕೇದಾರನಾಥ ದೇವಸ್ಥಾನಕ್ಕೆ ಕೈಗೊಳ್ಳುವ ಯಾತ್ರೆಯ ಸಂಪೂರ್ಣ ಚಿತ್ರಣವನ್ನು ಅಲಂಕರಿಸಿದ್ದಾರೆ. ಪ್ರತಿಷ್ಠಾಪನೆ ನಡೆದು ನಾಲ್ಕನೇ ದಿನವಾದ ಮಂಗಳವಾರ ಮಹಾಪೂಜೆ, ಪ್ರಸಾದ ಭೋಜನ ನಡೆಯಲಿದೆ. ಐದನೇ ದಿನ ಬುಧವಾರ ಭವ್ಯ ಮೆರವಣಿಗೆಯೊಂದಿಗೆ ಗಣಪನ ವಿಗ್ರಹ ವಿಸರ್ಜನೆಯಾಗಲಿದೆ.