ಶಿವರಾತ್ರಿ ದಿನ ಬರುವ ಭಕ್ತರ ಬಳಿ ಭಿಕ್ಷೆ ಬೇಡುತ್ತಿದ್ದ ಗಾಂಧೀಜಿ ವೇಷದಾರಿ ಬಾಲಕನಿಗೆ ಪೊಲೀಸರು ಬುದ್ದಿ ಹೇಳಿದ್ದಾರೆ. `ಭಿಕ್ಷೆ ಬೇಡುವುದು ಅಪರಾಧ’ ಎಂದು ಪೊಲೀಸರು ಅರಿವು ಮೂಡಿಸಿ ಬಾಲಕನನ್ನು ಬಿಟ್ಟು ಕಳುಹಿಸಿದ್ದಾರೆ.
ಕುಡಿತದ ಆಸೆಯಿಂದ ಕೆಲ ಕಿಡಿಗೇಡಿಗಳು ಬಾಲಕನನ್ನು ದುರುಪಯೋಗಪಡಿಸಿಕೊಂಡಿದ್ದರು. ಅಪಾಯಕಾರಿಯಾದ ಬಣ್ಣವನ್ನು ಬಾಲಕನ ಮೈಗೆ ತಿಕ್ಕಿ ಆತನನ್ನು ಗಾಂಧೀಜಿ ವೇಷ ಧರಿಸಿದ್ದರು. ಆ ನಂತರ ಆ ಬಾಲಕನ್ನು ಗೋಕರ್ಣದ ಬೀದಿ ಬೀದಿಗಳಲ್ಲಿ ಭಿಕ್ಷಾಟನೆಗೆ ಕಳುಹಿಸಿದ್ದರು. ಅನೇಕ ಭಕ್ತರು ಗಾಂಧೀಜಿ ವೇಷದಾರಿಗೆ ಹಣ ನೀಡಿದ್ದು, ಆ ಹಣವನ್ನು ಕಿಡಿಗೇಡಿಗಳು ಲಪಟಾಯಿಸುತ್ತಿದ್ದರು.
ಫೆ 26ರ ಬೆಳಗ್ಗೆ ಗೋಕರ್ಣದ ಬೀದಿ ಬೀದಿಯಲ್ಲಿ ಗಾಂಧೀಜಿ ವೇಷದಾರಿ ಬಾಲಕ ಭಿಕ್ಷೆ ಬೇಡುತ್ತಿರುವಾಗ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದರು. ಆ ಮಾಹಿತಿ ಆಧರಿಸಿ ಪೊಲೀಸರು ಈಶ್ವರ ದೇವಾಲಯದ ಬಳಿ ಬಾಲಕನನ್ನು ವಿಚಾರಣೆಗೆ ಒಳಪಡಿಸಿದರು. ಭಿಕ್ಷಾಟನೆಯಲ್ಲಿ ನಿರತ ಬಾಲಕನ ಬಗ್ಗೆ ಮಕ್ಕಳ ರಕ್ಷಣಾ ಘಟಕಕ್ಕೂ ಪೊಲೀಸರು ಮಾಹಿತಿ ನೀಡಿದರು. ಅದಾದ ನಂತರ ಬಾಲಕನ ತಾಯಿಯನ್ನು ಕರೆಯಿಸಿ ಅವರಿಗೂ ಎಚ್ಚರಿಕೆ ನೀಡಿದರು.
ಈ ಬಾಲಕ ಹಾಗೂ ತಾಯಿ ಮಹಾರಾಷ್ಟದ ಪಾಂಡವಾಪುರದಿAದ ಗೋಕರ್ಣಕ್ಕೆ ಬಂದಿದ್ದರು. ಬಡತನದ ಹಿನ್ನಲೆ ಭಿಕ್ಷಾಟನೆಗೆ ಒಪ್ಪಿಕೊಂಡಿದ್ದರು. ಕಾರ್ಮಿಕ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು, ಮಕ್ಕಳ ಸಹಾಯವಾಣಿ ಸಿಬ್ಬಂದಿ ಸೇರಿ ಭಿಕ್ಷಾಟನೆ ತಡೆದರು.