ತಾಲೂಕು ಪಂಚಾಯತಗೆ ಈವರೆಗೂ ಜನಪ್ರತಿನಿಧಿಗಳ ಆಯ್ಕೆ ನಡೆಯದ ಕಾರಣ ಅಧಿಕಾರಿಗಳ ಅಧ್ಯಕ್ಷತೆಯಲ್ಲಿಯೇ ಸಾಮಾನ್ಯ ಸಭೆ ನಡೆಯುತ್ತಿದೆ. ಹೀಗಾಗಿ ಈ ಸಭೆಯಲ್ಲಿ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತಿಲ್ಲ. ಬುಧವಾರ ಯಲ್ಲಾಪುರ ತಾಲೂಕು ಪಂಚಾಯತ ಸಭಾ ಭವನದಲ್ಲಿ ನಡೆದ ಸಭೆಯಲ್ಲಿಯೂ ಯಾವುದೇ ವಿಶೇಷತೆಗಳಿರಲಿಲ್ಲ!
ಎಲ್ಲಾ ಇಲಾಖೆಗಳಲ್ಲಿನ ಸಿಬ್ಬಂದಿ ಕೊರತೆ ಬಗ್ಗೆ ಸಭೆಯಲ್ಲಿ ಮುಖ್ಯ ಚರ್ಚೆ ನಡೆಯಿತು. ತಾಲೂಕಾ ಆಸ್ಪತ್ರೆ, ಕೆಎಸ್ಆರ್ಟಿಸಿ, ಕೃಷಿ ಇಲಾಖೆ, ಪಶು ಸಂಗೋಪನೆ, ಹೆಸ್ಕಾಂ, ಲೋಕೋಪಯೋಗಿ, ಶಿಶು ಅಭಿವೃದ್ಧಿ ಸೇರಿ ಹಲವು ಇಲಾಖೆಯವರು ಸಿಬ್ಬಂದಿ ಕೊರತೆ ಸಮಸ್ಯೆಯನ್ನು ಆಡಳಿತಾಧಿಕಾರಿಗಳ ಮುಂದಿಟ್ಟರು. `ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಇಲಾಖೆಯವರು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಕೊಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ನಟರಾಜ ಟಿ ಎಚ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ ನರೇಂದ್ರ ಪವಾರ ಮಾತನಾಡಿ,`ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ತುರ್ತಾಗಿ 5 ವೈದ್ಯರು ಬೇಕಾಗಿದ್ದಾರೆ. ವಜ್ರಳ್ಳಿ, ಮಲವಳ್ಳಿ, ಮಂಚಿಕೇರಿ, ಕಿರವತ್ತಿ ಮತ್ತು ಹಿತ್ಲಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೇರೆ ಬೇರೆ ಕಾರಣದಿಂದ ವೈದ್ಯರು ಲಭ್ಯವಿಲ್ಲ. ಕೆಲವರು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೋಗಿದ್ದಾರೆ. ಕೆಲವರು ಖಾಸಗಿ ಕಾರಣದ ನಿಮಿತ್ತ ರಜೆ ಹಾಕಿದ್ದಾರೆ’ ಎಂಬ ಮಾಹಿತಿ ನೀಡಿದರು.
ಪಶುವೈದ್ಯ ಡಾ. ಸುಬ್ರಾಯ ಭಟ್ಟ ಮಾತನಾಡಿ `ಹಿಂದಿನ ಗಣತಿಗೆ ಹೋಲಿಸಿದರೆ ತಾಲ್ಲೂಕಿನಲ್ಲಿ ಅಂದಾಜು 7 ಸಾವಿರ ಪಶುಗಳ ಸಂಖ್ಯೆ ಕಡಿಮೆ ಇದೆ. ರೈತರಲ್ಲಿ ಜಾನುವಾರು ಸಾಕುವ ಪ್ರವೃತ್ತಿ ಕಡಿಮೆಯಾಗುತ್ತಿದ್ದು, ಶೇಕಡಾ 30ರಷ್ಟು ರೈತರು ದನಕರುಗಳನ್ನು ಸಾಕುತ್ತಿಲ್ಲ’ ಎಂಬ ಸತ್ಯ ಬಿಚ್ಚಿಟ್ಟರು. ಹಾಲಿನ ಡೈರಿಗಳು ಮುಚ್ಚುವ ಹಂತದಲ್ಲಿರುವ ಬಗ್ಗೆ ಆತಂಕವ್ಯಕ್ತಪಡಿಸಿದರು.
ಸಹಾಯಕ ಕೃಷಿ ನಿರ್ದೇಶಕ ನಾಗರಾಜ ನಾಯ್ಕ ಮಾತನಾಡಿ, `ವಿವಿಧ ಕಾರಣಗಳಿಂದ ಕೃಷಿಯ ಕ್ಷೇತ್ರ ಕಡಿಮೆ ಆಗುತ್ತಿದೆ. ಆನೆ, ಕಾಡುಕೋಣ, ಕಾಡುಹಂದಿಗಳಿAದ 76 ಎಕರೆಯಷ್ಟು ಪ್ರದೇಶದಲ್ಲಿ ಬೆಳೆಹಾನಿ ಉಂಟಾಗಿದೆ’ ಎಂದರು. ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಮಾತನಾಡಿ `ಶಾಲಾ ಕೊಠಡಿಗಳ ದುರಸ್ತಿಗೆ ಅನುದಾನದ ಅಗತ್ಯವಿದೆ’ ಎಂದರು. ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಸಂತೋಷ ವೆರ್ಣೇಕರ ಮಾತನಾಡಿ, ಘಟಕದಲ್ಲಿ 20 ಚಾಲಕರ ಕೊರತೆ ಇರುವುದಾಗಿ ತಿಳಿಸಿದರು.
ಸಹಾಯಕ ತೋಟಗಾರಿಕಾ ಅಧಿಕಾರಿ ಕೀರ್ತಿ ಮಾತನಾಡಿ, `ಮುಂದಿನ ವರ್ಷದಿಂದ ಕಡಿಮೆ ವೆಚ್ಚದ ಅಣಬೆ ಘಟಕಗಳಿಗೆ ಸಹಾಯಧನ ವಿತರಣೆ ಯೋಜನೆ ಆರಂಭವಾಗಲಿದೆ’ ಎಂದರು. ತಾಲೂಕು ಪಂಚಾಯಿತಿ ಇಒ ರಾಜೇಶ ಧನವಾಡಕರ, ಲೆಕ್ಕಾಧಿಕಾರಿ ಎಂ ಡಿ ಮೋಹನ ಸಿಡಿಪಿಒ ಶ್ರೀದೇವಿ ಪಾಟೀಲ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ದಾಕ್ಷಾಯಣಿ ನಾಯ್ಕ, ಹೆಸ್ಕಾಂ’ನ ರಮಾಕಾಂತ ನಾಯ್ಕ ಇದ್ದರು. ಎಂದಿನoತೆ ಈ ಬಾರಿಯೂ ನಿಗದಿತ ಸಮಯಕ್ಕಿಂತ ಒಂದು ತಾಸು ತಡವಾಗಿ ಸಭೆ ಆರಂಭವಾಯಿತು. ನಿಗದಿತ ಸಮಯಕ್ಕೆ ಬಂದ ಆಡಳಿತಾಧಿಕಾರಿ ಇತರ ಅಧಿಕಾರಿಗಳಿಗಾಗಿ ಮುಕ್ಕಾಲು ತಾಸು ಕಾದರು. ಒಟ್ಟಾರೆಯಾಗಿ ಚರ್ಚೆಯ ವಿಷಯಗಳು ಸಭೆಯಲ್ಲಿ ವಿತರಿಸಿದ ಇಡ್ಲಿ-ವಡೆಗಿಂತಲೂ ಸಪ್ಪೆ ಸಪ್ಪೆಯಾಗಿದ್ದವು!