ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಜನರಿಗೆ ಮುಂಬೈ ಪರಿಚಯಿಸಿದ್ದ ಮತ್ಸ್ಯಗಂಧ ಎಕ್ಸಪ್ರೆಸ್ ರೈಲು ಫೆ 17ರಿಂದ ಹಲವು ವಿಶೇಷತೆಗಳೊಂದಿಗೆ ಓಡಾಟ ನಡೆಸಲಿದೆ. ಹೊಸ ಬಣ್ಣ ಹಾಗೂ ಹೊಸ ಬೋಗಿಗಳಿಂದ ಈ ರೈಲು ಕಂಗೊಳಿಸಲಿದೆ.
ಅತ್ಯುನ್ನತ ಜರ್ಮನ್ ತಂತ್ರಜ್ಞಾನದಲ್ಲಿ ವಿಶೇಷ ಬೋಗಿಗಳನ್ನು ಈ ರೈಲಿಗಾಗಿ ನಿರ್ಮಿಸಲಾಗಿದೆ. ರೈಲು ಅಪಘಾತವಾದರೂ ಪ್ರಯಾಣಿಕರ ಪ್ರಾಣಕ್ಕೆ ಕಿಂಚಿತ್ತು ತೊಂದರೆಯಾಗುವುದಿಲ್ಲ. ಅಪಘಾತ ನಡೆದ ತಕ್ಷಣ ರೈಲಿನ ಬೋಗಿಗಳು ಜಿಗ್ಜಾಗ್ ರೀತಿ ವರ್ಗಿಕರಿಸಿ ಅಲ್ಲಿಯೇ ನಿಂತುಬಿಡುತ್ತವೆ. ಇನ್ನೂ ಈ ರೈಲಿನ ಶಬ್ದ ಮೊದಲಿನಂತೆ ಇರುವುದಿಲ್ಲ. ಶೌಚಾಲಯ ವ್ಯವಸ್ಥೆ ಸಹ ಆಧುನಿಕ ಶೈಲಿಯಲ್ಲಿರುತ್ತದೆ.
ಮುಂಬೈ ಹಾಗೂ ಮಂಗಳೂರಿನ ನಡುವೆ ಸಂಪರ್ಕ ಬೆಸೆಯುವ ಮತ್ಸ್ಯಗಂಧ ರೈಲು ಕರಾವಳಿಯ 22 ನಿಲ್ದಾಣದ ಜನರನ್ನು ಕರೆದೊಯ್ಯುತ್ತದೆ. ನಿತ್ಯ ಸಾವಿರಕ್ಕೂ ಅಧಿಕ ಜನ ಈ ರೈಲಿನಲ್ಲಿ ಸಂಚರಿಸುತ್ತಾರೆ. 1998ರ ಮೇ 1ರಂದು ಈ ರೈಲು ಓಡಾಟ ಶುರು ಮಾಡಿದ್ದು, 28 ವರ್ಷಗಳಿಂದ ಅದೇ ಬೋಗಿಗಳಿವೆ. ಹೀಗಾಗಿ ಜನರ ಜೊತೆ ಈ ರೈಲು ಭಾವನಾತ್ಮಕವಾಗಿ ಬೆಸೆದುಕೊಂಡಿದೆ.
ಸದ್ಯ ಹಳೆಯದಾದ ಬೋಗಿಗಳನ್ನು ಬದಲಿಸುವ ಕಾರ್ಯ ನಡೆದಿದೆ. ಅದರೊಂದಿಗೆ ಇನ್ನಷ್ಟು ಆಧುನಿಕತೆಯನ್ನು ಅಳವಡಿಸಿಕೊಳ್ಳಲಾಗಿದೆ.