ಕುಮಟಾ: ಅಘನಾಶಿನಿ ನದಿಗೆ ಅಡ್ಡಲಾಗಿ ಗೋಕರ್ಣದ ಸಾಣೆಕಟ್ಟಾ ಬಳಿ ನಿರ್ಮಿಸುವ ಉಪ್ಪಿನ ಆಗರದ ಬಳಿ ಗೋದಾವರಿ ಹೊಟೇಲ್ ತ್ಯಾಜ್ಯ ಸುರಿಯುತ್ತಿರುವುದನ್ನು ಸ್ಥಳೀಯರು ಪತ್ತೆ ಮಾಡಿದ್ದಾರೆ.
ಮಂಗಳವಾರ ರಾತ್ರಿ ಗೋದಾವರಿ ಎಂಬ ಟ್ಯಾಂಕರ್ ಮೂಲಕ ಹೊಸಲು ನೀರು ತಂದು ಉಪ್ಪಿನ ಆಗರದ ಬಳಿ ಸುರಿಯಲಾಗಿದ್ದು, ಈ ವೇಳೆ ಸ್ಥಳೀಯರು ಟ್ಯಾಂಕರಿನಲ್ಲಿದ್ದವರನ್ನು ಮುತ್ತಿಗೆ ಹಾಕಿದರು. ಜೊತೆಗೆ ತ್ಯಾಜ್ಯದ ನೀರು ಬಿಡುವುದನ್ನು ವಿಡಿಯೋ ಮಾಡಿ ವೈರಲ್ ಮಾಡಿದರು. `ಪ್ರತಿ ದಿನ ಇಲ್ಲಿ ತ್ಯಾಜ್ಯದ ನೀರು ಬಿಡಲಾಗುತ್ತಿದೆ’ ಎಂದು ಅಲ್ಲಿನವರು ದೂರಿದ್ದಾರೆ. ಈ ಹಿಂದೆ ಅಲ್ಲಿನ ಗಟಾರಕ್ಕೆ ತ್ಯಾಜ್ಯದ ನೀರು ಬಿಡಲಾಗುತ್ತಿತ್ತು. ಇದೀಗ ಅದನ್ನು ಉಪ್ಪಿನ ಆಗರದ ಬಳಿ ಬಿಡುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. `ಸಾಣಿಕಟ್ಟಾದ ಮೇಲ್ಭಾಗದಲ್ಲಿ ಬಿಟ್ಟ ಈ ತ್ಯಾಜ್ಯದ ನೀರು ಉಪ್ಪಿನ ಆಗರವನ್ನು ಸೇರಿ ಉಪ್ಪಿನೊಳಗೆ ಮಿಶ್ರಣಗೊಳ್ಳುವ ಸಾಧ್ಯತೆಯಿದೆ. ಇದರಿಂದ ಉಪ್ಪು ಕಲುಷಿತವಾಗಲಿದ್ದು, ಹೆಸರು ಹಾಳಾಗಲಿದೆ’ ಎಂದು ಜನ ಆತಂಕ ವ್ಯಕ್ತಪಡಿಸಿದರು.
ಅನುಮಾನಕ್ಕೆ ಕಾರಣವಾದ ಸೊಸೈಟಿ ಸ್ಪಷ್ಠನೆ:
ಉಪ್ಪಿನ ಆಗರದ ಬಳಿ ತ್ಯಾಜ್ಯ ಬಿಟ್ಟಿರುವುದು ಎಲ್ಲಾ ಕಡೆ ಗೊತ್ತಾಗುವುದು ಗೋದಾವರಿ ಹೊಟೇಲಿನವರಿಗೂ ಬೇಡ. ಉಪ್ಪಿನ ಸೊಸೈಟಿಯವರಿಗೂ `ತಮ್ಮ ಉಪ್ಪು ಕಲುಷಿತ’ ಎಂದು ಪ್ರಚಾರ ಆಗುವುದು ಬೇಡ. ಹೀಗಾಗಿ ಎರಡು ಕಡೆಯವರು ರಾಜಿಯಾಗಿ `ಉಪ್ಪಿನ ಆಗರಕ್ಕೆ ಯಾವುದೇ ತ್ಯಾಜ್ಯ ಸೇರಿಲ್ಲ’ ಎಂದು ಹೇಳಿಕೊಂಡಿದ್ದಾರೆ. ಗೋದಾವರಿ ಸಮೂಹ ಸಂಸ್ಥೆ ಮಾಲಕ ರಾಘವೇಂದ್ರ ಡಿ ನಾಯಕ ಬರೆದ ಪತ್ರಕ್ಕೆ ಸೊಸೈಟಿ ಸ್ಪಷ್ಠನೆ ನೀಡಿದ್ದು, `ಉಪ್ಪಿನ ಆಗರಕ್ಕೆ ಯಾವುದೇ ತ್ಯಾಜ್ಯ ಸೇರಿಲ್ಲ’ ಎಂದು ಹೇಳಿದೆ. ಆದರೆ, ಸೊಸೈಟಿ ಸ್ಪಷ್ಠನೆ ನೀಡುವ ಮುನ್ನ ಉಪ್ಪು ಕಲುಷಿತವಾಗಿದೆಯೇ? ಎಂದು ಪರೀಕ್ಷೆ ನಡೆಸಿಲ್ಲ. ಟ್ಯಾಂಕರ್ ತ್ಯಾಜ್ಯ ಎಲ್ಲಿ ಚಿಲ್ಲಿದ್ದು? ಎಂದು ಪ್ರಶ್ನಿಸಿಲ್ಲ. ಒತ್ತಡಕ್ಕೆ ಮಣಿದು ಈ ಸ್ಪಷ್ಠೀಕರಣ ಕೊಟ್ಟ ಹಾಗೇ ಕಾಣುತ್ತಿದೆ.