ಮಠ, ಎದ್ದೇಳು ಮಂಜುನಾಥ ಸೇರಿ ಹಲವು ಚಿತ್ರಗಳ ನಿರ್ದೇಶನ ಮಾಡಿದ್ದ ನಟ ಗುರುಪ್ರಸಾದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗೋಕರ್ಣದಲ್ಲಿ ಹುಚ್ಚನಂತೆ ಬೀದಿ ಬೀದಿ ಅಲೆಯುತ್ತಿದ್ದ ವ್ಯಕ್ತಿಯೊಬ್ಬರ ಜೀವನ ಬದಲಿಸಿದ್ದ ಗುರುಪ್ರಸಾದ ಆತ್ಮಹತ್ಯೆಯ ವಿಷಯ ಅವರ ಒಡನಾಡಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
2016ರಲ್ಲಿ `ಎರಡನೇ ಸಲ’ ಎಂಬ ಚಿತ್ರ ನಿರ್ಮಾಣಕ್ಕಾಗಿ ಗುರುಪ್ರಸಾದ ಗೋಕರ್ಣಕ್ಕೆ ಬಂದಿದ್ದರು. ಉದ್ದನೇಯ ಗಡ್ಡ, ಕಪ್ಪು ಕನ್ನಡಕ, ಹರಿದ ಬಟ್ಟೆ ಧರಿಸಿ ಎಲ್ಲೆಂದರಲ್ಲಿ ಅಡ್ಡಾಡುತ್ತಿದ್ದ ಮುತ್ತಣ್ಣನನ್ನು ಅವರು ಗಮನಿಸಿದ್ದರು. ಆತನನ್ನು ಮಾತನಾಡಿಸಿ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿಯೂ ಹೇಳಿದ್ದರು. ಆದರೆ, ಮುತ್ತಣ್ಣ ಅದಕ್ಕೆ ಒಪ್ಪಿರಲಿಲ್ಲ.
ಅದಾಗಿಯೂ ಮುತ್ತಣ್ಣನ ಸ್ನೇಹ ಸಂಪಾದಿಸಿದ ಗುರುಪ್ರಸಾದ್ ಮೊದಲು ಅವರ ಕೂದಲು ತೆಗೆಸಿದ್ದರು. ನಂತರ ಸ್ನಾನ ಮಾಡಿಸಿ ಹೊಸ ಬಟ್ಟೆ ಕೊಡಿಸಿದ್ದರು. ಅದಾದ ಮೇಲೆ ಮುತ್ತಣ್ಣರನ್ನು ಬೆಂಗಳೂರಿಗೆ ಕರೆದೊಯ್ದು ತಿಂಗಳುಗಳ ಕಾಲ ಚಿಕಿತ್ಸೆಯನ್ನು ಕೊಡಿಸಿದರು. ತಾನು ಯಾರು? ಏನು? ಎಲ್ಲಿಯವ? ಎಂದು ಅರಿವಿಲ್ಲದ ಮುತ್ತಣ್ಣನಿಗೆ ನಿರ್ದೇಶಕ ಗುರುಪ್ರಸಾದ ಹೊಸ ಬದುಕು ಕಟ್ಟಿಕೊಟ್ಟಿದ್ದರು.
ಗೋಕರ್ಣದಲ್ಲಿ ಅಲೆಯುತ್ತಿದ್ದ ಮುತ್ತಣ್ಣ ಡೈರೆಕ್ಟರ್ ಸ್ಪೇಶಲ್ ಗುರುಪ್ರಸಾದ ಅವರ ಕಣ್ಣಿಗೆ ಬಿದ್ದ ಕಾರಣ ಸಂಪೂರ್ಣವಾಗಿ ಬದಲಾಗಿದ್ದ. ಮಾನಸಿಕ ಅಸ್ವಸ್ಥನಾಗಿ ಭಿಕ್ಷೆ ಬೇಡುವುದನ್ನು ಬಿಟ್ಟು ಆತ ದುಡಿಯಲು ಶುರು ಮಾಡಿದ್ದ. ಅದಾದ ನಂತರವೂ ಅವರು ಮುತ್ತಣ್ಣನ ಜೊತೆ ಅನೇಕ ಸಲ ಕಾಣಿಸಿಕೊಂಡಿದ್ದರು. ಮುತ್ತಣ್ಣ ಸಾಮಾನ್ಯ ಜೀವನ ನಡೆಸಲು ಶುರು ಮಾಡಿದ ಮೇಲೆ ಅವರಿಗೆ ತಮ್ಮದೇ ಕಚೇರಿಯಲ್ಲಿ ಉದ್ಯೋಗ ಕೊಟ್ಟಿದ್ದರು.
ಉತ್ತರ ಕನ್ನಡ ಜಿಲ್ಲೆಯ ಸಾಕಷ್ಟು ಕಡೆ ಗುರುಪ್ರಸಾದ ಓಡಾಟ ನಡೆಸಿದ್ದಾರೆ. ಅವರ ಜೊತೆ ಇಲ್ಲಿನ ಅನೇಕರು ಒಡನಾಟ ಹೊಂದಿದ್ದರು. ಮಾನಸಿಕ ಅಸ್ವಸ್ಥರಿಗೆ ಸಹ ಸ್ಪೂರ್ತಿ ತುಂಬಿ ಅವರನ್ನು ಮುಖ್ಯವಾಹಿನಿಗೆ ತಂದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದನ್ನು ಅವರ ಆಪ್ತರಿಂದ ಅರೆಗಿಸಿಕೊಳ್ಳಲಾಗುತ್ತಿಲ್ಲ.