`ಕುಮಟಾ (Gokarna): `ಶ್ರೀರಾಮನಂಥ ಮಹಾಪುರುಷರು ಮಾತ್ರವೇ ಜೀವಯಾನವನ್ನು ದೇವಯಾನವಾಗಿ ಪರಿವರ್ತಿಸಬಲ್ಲರು. ರಾಮನನ್ನು ಆಶ್ರಯಿಸಿದ ಎಲ್ಲರೂ ಮೋಕ್ಷವನ್ನು ಪಡೆಯುತ್ತಾರೆ. ಬೇರೆಯವರಿಗೆ ಜೀವಯಾನ ಕ್ಲೇಶಕರವಾದರೆ, ಅನನ್ಯನಾಗಿ ರಾಮನನ್ನು ಆಶ್ರಯಿಸುವವರಿಗೆ ಮೋಕ್ಷ ಸಾಧನೆಯಾಗುತ್ತದೆ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಗೋಕರ್ಣದ ಅಶೋಕೆಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಅವರು 23ನೇ ದಿನದ ಜೀವಯಾನ ಮಾಲಿಕೆಯಲ್ಲಿ ಪ್ರವಚನ ನೀಡಿದರು.
`ಜೀವಯಾನ ಒಂದರ್ಥದಲ್ಲಿ ದೇವಯಾನ. ಜೀವ-ದೇವ ಯಾನ’ ಎಂದ ಅವರು ರಾಮಾವತಾರದ ಕೊನೆಯ ಭಾಗದಲ್ಲಿ ಬರುವ ಶ್ರೀರಾಮನ ನಿರ್ಯಾಣದ ಪಯಣವನ್ನು ಬಣ್ಣಿಸಿದರು. `ರಾಮಾವತಾರದ ಕೊನೆಯ ದಿನಗಳಲ್ಲಿ ತಾಪಸನೊಬ್ಬ ಬಂದು ಲಕ್ಷ್ಮಣ ಬಳಿ ಬಂದು ರಾಮನ ಭೇಟಿಯ ಇಂಗಿತ ವ್ಯಕ್ತಪಡಿಸುತ್ತಾನೆ. ಅದರಂತೆ ರಾಮನ ಬಳಿಗೆ ಆತನನ್ನು ಕರೆತಂದಾಗ, ಇಬ್ಬರು ಮಾತ್ರ ಮಾತನಾಡಬೇಕು ಎಂದು ನಮ್ಮಿಬ್ಬರ ಸಂಭಾಷಣೆಯನ್ನು ಕೇಳಿಸಿಕೊಂಡರೆ ಆತನಿಗೆ ಮೃತ್ಯುದಂಡ ನೀಡಬೇಕೆಂದು ಷರತ್ತು ವಿಧಿಸುತ್ತಾನೆ. ಬಾಗಿಲಲ್ಲಿ ನಿಂತು ಕಾಯುವಂತೆ ಲಕ್ಷ್ಮಣನಿಗೆ ಸೂಚಿಸುತ್ತಾನೆ. ಅಲ್ಲಿಗೆ ಬಂದ ತಾಪಸಿ ನಿಜವಾಗಿ ಬ್ರಹ್ಮದೇವ ಕಳುಹಿಸಿಕೊಟ್ಟ ಕಾಲಪುರುಷನಾಗಿದ್ದ. ಯಮ ಕಾಲಾತ್ಮಕನಾಗಿ ಅಲ್ಲಿಗೆ ಬಂದಿದ್ದ’ ಎಂದು ವಿವರಿಸಿದರು.
Discussion about this post