ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರೊಬ್ಬರ ಮನೆಯಲ್ಲಿ ಕಳ್ಳತನ ನಡೆದಿದೆ. ಬಂಗಾರದ ಆಭರಣ, ಬೆಳ್ಳಿಯ ಕಾಲುಂಗರ, 10 ಸಾವಿರ ರೂ ಹಣದ ಜೊತೆ ಲ್ಯಾಪ್ಟಾಪ್’ನ್ನು ಕಳ್ಳರು ದೋಚಿದ್ದಾರೆ.
ಯಲ್ಲಾಪುರ ತಾಲೂಕಿನ ಬಾಳಗಿಮನೆ ಕಪ್ಪೆಗದ್ದೆ ಏರಿಯಾದಲ್ಲಿ ಮಹಾಬಲೇಶ್ವರ ಗೇರಗದ್ದೆ ವಾಸವಾಗಿದ್ದಾರೆ. ಅವರು ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರಾಗಿದ್ದು, ಅವರ ಮನೆಯೊಳಗೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಫೆ 28ರ ಬೆಳಗ್ಗಿನ ಅವಧಿಯಲ್ಲಿಯೇ ಈ ಕಳ್ಳತನ ನಡೆದಿದೆ.
ಮಹಾಬಲೇಶ್ವರ ಗೇರಗದ್ದೆ ಅವರ ಮನೆಯ ಹಿಂದಿನ ಬಾಗಿಲಿನ ಚಿಲಕ ಒಡೆದ ಕಳ್ಳರು ನೇರವಾಗಿ ಬೆಡ್ ರೂಂ ಪ್ರವೇಶಿಸಿದ್ದಾರೆ. ಅಲ್ಲಿದ್ದ ಕಪಾಟುಗಳನ್ನು ಗಮನಿಸಿ ಒಳಗಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿಯಾಗಿ ಮಾಡಿದ್ದಾರೆ. ಅದಾದ ನಂತರ ಎರಡು ಕಪಾಟಿನಲ್ಲಿದ್ದ 9.80 ಲಕ್ಷ ರೂ ಮೌಲ್ಯದ ಬಂಗಾರದ ಆಭರಣಗಳನ್ನು ಅಪಹರಿಸಿದ್ದಾರೆ. ಇದರೊಂದಿಗೆ 5 ಜೊತೆ ಬೆಳ್ಳಿಯ ಕಾಲುಂಗರವನ್ನು ದೋಚಿದ್ದಾರೆ.
ಬೆಳಗ್ಗೆ 9.45ರ ಸುಮಾರಿಗೆ ಮನೆಗೆ ಬೀಗ ಹಾಕಿ ಹೋಗಿದ್ದ ಉಪನ್ಯಾಸಕರು ಮಧ್ಯಾಹ್ನ 12 ಗಂಟೆಗೆ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಮನೆಯಲ್ಲಿದ್ದ 10 ಸಾವಿರ ರೂ ಹಣದ ಜೊತೆ 25 ಸಾವಿರ ರೂ ಮೌಲ್ಯದ ಡೆಲ್ ಕಂಪನಿಯ ಲಾಪ್ಟಾಪ್ ಸಹ ಕಾಣದ ಬಗ್ಗೆ ಅವರು ಪೊಲೀಸ್ ದೂರು ನೀಡಿದ್ದಾರೆ.